ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಮೊಕದ್ದಮೆ ಸಾಗಿ ಬಂದ ಹಾದಿ...

ಹೊಸದಿಲ್ಲಿ,ಜೂ.17: 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ನಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ಕುರಿತ ತನ್ನ ತೀರ್ಪನ್ನು ವಿಶೇಷ ಸಿಟ್ ನ್ಯಾಯಾಲಯವು ಜೂನ್ 2ರಂದು ಘೋಷಿಸಿತ್ತು. ಈ ಭೀಕರ ನರಮೇಧದ ಆರೋಪಗಳಿಗೆ ಶಿಕ್ಷೆಯ ಪ್ರಮಾಣವನ್ನು ಅದು ಶುಕ್ರವಾರ ಪ್ರಕಟಿಸಿದೆ.
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ಒಟ್ಟು 66 ಮಂದಿ ಆರೋಪಿಗಳ ಪೈಕಿ 24 ಮಂದಿಯನ್ನು ದೋಷಿಗಳೆಂದು ಪರಿಗಣಿಸಿ ವಿಶೇಷ ಸಿಟ್ ನ್ಯಾಯಾಲಯವು ಜೂನ್ 2ರಂದು ತೀರ್ಪು ನೀಡಿತ್ತು. ಹಾಲಿ ಬಿಜೆಪಿ ಕಾರ್ಪೊರೇಟರ್ ಬಿಪಿನ್ ಪಟೇಲ್ ಸಹಿತ ಉಳಿದ 36 ಮಂದಿಯನ್ನು ಅದು ದೋಷಮುಕ್ತಗೊಳಿಸಿತ್ತು. ಶುಕ್ರವಾರದಂದು ಪ್ರಕರಣದ 11 ಮಂದಿ ಅಪರಾಧಿಗಳಿಗೆ ಸಾಯುವವರೆಗೆ ಜೈಲು ಶಿಕ್ಷೆಯನ್ನು ಘೋಷಿಸಿದೆ. ಉಳಿದ 12 ಮಂದಿ ಅಪರಾಧಿಗಳಿಗೆ 7 ವರ್ಷ ಹಾಗೂ ಇನ್ನೋರ್ವನಿಗೆ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದೆ.
ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದಿದ್ದೇನು?
2002ರ ಫೆಬ್ರವರಿ 27ರಂದು, ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ನಿಂತಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ನ ಎಸ್-6 ಕೋಚ್‌ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ 59 ಮಂದಿ ಅಯೋಧ್ಯಾ ಕರಸೇವಕರು ಜೀವಂತ ದಹನಗೊಂಡಿದ್ದರು.
ಇದಾದ ಒಂದು ದಿನದ ಬಳಿಕ, ಗುಜರಾತ್‌ನ ಅಹ್ಮದಾಬಾದ್‌ನ ಚಮನ್‌ಪುರ (ಹಿಂದೂಗಳು ಬಹುಸಂಖ್ಯೆಯಲ್ಲಿರುವ ಪ್ರದೇಶ)ದಲ್ಲಿರುವ ಗುಲ್ಬರ್ಗ್ ಸೊಸೈಟಿಯಲ್ಲಿ ವಾಸವಾಗಿದ್ದ ಮುಸ್ಲಿಮರು, ಅದೇ ಅಪಾರ್ಟ್‌ಮೆಂಟ್‌ನಲ್ಲಿರುವ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿಯವರ ನಿವಾಸದಲ್ಲಿ ಆಶ್ರಯ ಪಡೆದುಕೊಂಡಿದ್ದರು. ಮಧ್ಯಾಹ್ನದ ವೇಳೆಗೆ ಉದ್ರಿಕ್ತಗುಂಪೊಂದು ಸೊಸೈಟಿ ಕಟ್ಟಡದ ಸುತ್ತ ಜಮಾಯಿಸಿತ್ತು ಹಾಗೂ ಕಟ್ಟಡದಲ್ಲಿದ್ದ ಬಹುತೇಕ ಮನೆಗಳಿಗೆ ಬೆಂಕಿ ಹಚ್ಚಿತ್ತು. ಈ ಭೀಕರ ಹತ್ಯಾಕಾಂಡದಲ್ಲಿ ಜಾಫ್ರಿ ಸೇರಿದಂತೆ 69 ಮಂದಿ ಬರ್ಬರವಾಗಿ ಹತ್ಯೆಯಾಗಿದ್ದರು.
ಜಾಫ್ರಿಯವರನ್ನು ಮಾರಕಾಯುಧಗಳಿಂದ ಕಡಿದು ಹಾಕಿದ ಬಳಿಕ ಅವರನ್ನು ಜೀವಂತವಾಗಿ ದಹಿಸಲಾಯಿತೆಂದು ಮಾನವಹಕ್ಕುಗಳ ವರದಿಯೊಂದು ತಿಳಿಸಿತ್ತು.ಗಲಭೆಕೋರರು ಸೊಸೈಟಿ ಕಟ್ಟಡದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಜಾಫ್ರಿ ಪೊಲೀಸ್ ಠಾಣೆಗೆ ಕರೆ ಮಾಡಲು ಯತ್ನಿಸಿದರು. ಆನಂತರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಆಗಿನ ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿಯವರಿಗೂ ಕರೆ ಮಾಡಿ ರಕ್ಷಣೆಗಾಗಿ ಯಾಚಿಸಿದರೂ ಯಾವುದೇ ನೆರವು ದೊರೆಯಲಿಲ್ಲವೆಂದು ವರದಿಯು ಹೇಳಿತ್ತು. ಅವರ ನೆರೆಯ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿದಾಗ, ಅವರ ದೂರವಾಣಿ ಸಂಪರ್ಕವೂ ಕಡಿದುಹೋಗಿತ್ತೆಂದು ವರದಿ ತಿಳಿಸಿತ್ತು.
ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು, ಪೊಲೀಸ್ ಅಧಿಕಾರಿಗಳು, ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೈಜೋಡಿಸಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದರೆಂದು, ಪ್ರಕರಣದ ಮುಖ್ಯ ಅರ್ಜಿದಾರೆ ಜಾಫ್ರಿಯಾರ ಪತ್ನಿ ಝಕೀಯಾ ಆಪಾದಿಸಿದ್ದರು.
ವಿಎಚ್‌ಪಿ ಹಾಗೂ ಬಜರಂಗದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ಈ ಪ್ರಕರಣದ ರೂವಾರಿಗಳೆಂದು ಗುರುತಿಸಲಾಗಿತ್ತು, ಅಲ್ಪಸಂಖ್ಯಾತರ ಮೇಲೆ ನಡೆದ ಬರ್ಬರ ದಾಳಿಗೆ ಸಂಬಂಧಿಸಿ ನ್ಯಾಯಾಲಯದಲ್ಲಿ ಸಂತ್ರಸ್ತರು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದಾಗ್ಯೂ, ಆರೋಪಿಗಳ ಪರ ವಕೀಲರು, ಎಹ್ಸಾನ್ ಜಾಫ್ರಿ ಹಲವು ಸುತ್ತು ಗುಂಡುಗಳನ್ನು ಹಾರಿಸಿದ್ದರಿಂದ ಗುಂಪು ಹಿಂಸಾಚಾರಕ್ಕಿಳಿಯಿತೆಂದು ವಾದಿಸಿದ್ದರು.
ನರೇಂದ್ರ ಮೋದಿ ಕೂಡಾ ಸಿಟ್ ಮುಂದೆ ಹಾಜರಾಗಿದ್ದರು.
2008ರಲ್ಲಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ಮಾಜಿ ಸಿಬಿಐ ನಿರ್ದೇಶಕ ಆರ್.ಕೆ. ರಾಘವನ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಿತ್ತು. ರಾಜ್ಯ ಸರಕಾರ ಕೂಡಾ ಗುಲ್ಬರ್ಗ್ ನರಮೇಧ ಸೇರಿದಂತೆ 2002ರ ಗುಜರಾತ್ ಗಲಭೆಯ 9 ಪ್ರಕರಣಗಳ ಮರು ತನಿಖೆಗೆ ಆದೇಶ ನೀಡಿತ್ತು.
ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯ ಸರಕಾರದ ಹಲವು ಅಧಿಕಾರಿಗಳು ಹಾಗೂ ಸಚಿವರು ಸೇರಿದಂತೆ ಗಲಭೆಯ ರೂವಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲವೆಂಬ ಝಕೀಯಾ 2007ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಗುಜರಾತ್ ಹೈಕೋರ್ಟ್ ನಿರಾಕರಿಸಿತು. ಆದರೆ 2009ರಲ್ಲಿ ಆಕೆಯ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿತು ಹಾಗೂ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಟ್‌ಗೆ ಆದೇಶಿಸಿತು. ಇದರ ಬೆನ್ನಲ್ಲೇ ಗುಜರಾತ್ ಸರಕಾರವು, ಗುಲ್ಬರ್ಗ್ ಸೊಸೈಟಿ ಪ್ರಕರಣದಲ್ಲಿ ಮೋದಿಯ ಪಾತ್ರವಿರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ನಡೆಸುವ ಮೂಲಕ ಸಿಟ್ ತನ್ನ ಕಾರ್ಯವ್ಯಾಪ್ತಿಯನ್ನು ಮೀರಿ ವರ್ತಿಸುತ್ತಿದೆಯೆಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು ನೀಡಿತ್ತು.
2010ರ ಮಾರ್ಚ್ 27ರಂದು ಮೋದಿ ಸಿಟ್ ಮುಂದೆ ಹಾಜರಾದರು ಹಾಗೂ 2012ರ ಎಪ್ರಿಲ್‌ನಲ್ಲಿ ತನಿಖಾ ತಂಡವು, ಗುಜರಾತ್ ಗಲಭೆಯಲ್ಲಿ ಮೋದಿಯ ಪಾತ್ರವಿರುವ ಬಗ್ಗೆ ಸೂಕ್ತ ಸಾಕ್ಷಾಧಾರಗಳಿಲ್ಲವೆಂದು ಹೇಳಿ ಅವರಿಗೆ ಕ್ಲೀನ್ ಚಿಟ್ ನೀಡಿತು.
ಸಂತ್ರಸ್ತರ ಪರ ತೀಸ್ತಾ ಹೋರಾಟ
ಗುಜರಾತ್ ಗಲಭೆಗೆ ಸಂಬಂಧಿಸಿ ವರದಿಗಳನ್ನು ಪಡೆದುಕೊಳ್ಳಲು ಅವಕಾಶ ನೀಡುವಂತೆ ಕೋರಿ ಸಂತ್ರಸ್ತರ ಪರ ನ್ಯಾಯಾಂಗ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ಝಕೀಯಾರ ಜೊತೆಗೂಡಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಗುಲ್ಬರ್ಗ್ ಹಿಂಸಾಚಾರದಲ್ಲಿ ಮೋದಿ ಮತ್ತಿತರ ರಪಾತ್ರವನ್ನು ಬಯಲಿಗೆಳೆಯಬೇಕೆಂಬ ಉದ್ದೇಶದಿಂದ ಸೆಟಲ್ವಾಡ್ ಈ ಅರ್ಜಿಯನ್ನು ಸಲ್ಲಿಸಿದ್ದರು. 2012ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಝಕೀಯಾ ಅವರಿಗೆ ಗಲಭೆಗೆ ಸಂಬಂಧಿಸಿ ದಾಖಲೆಗಳನ್ನು ಹಾಗೂ ವರದಿಯನ್ನು ಒದಗಿಸುವಂತೆ ಸಿಟ್‌ಗೆ ಆದೇಶಿಸಿತು.
ಆದಾಗ್ಯೂ, ಸೆಟಲ್ವಾಡ್ ತನ್ನ ಸ್ವಯಂಸೇವಾ ಸಂಸ್ಥೆ (ಎನ್‌ಜಿಓ)ಯ ಖಾತೆಯಲ್ಲಿದ್ದ 14.2 ಲಕ್ಷ ರೂ.ಗಳನ್ನು ಆಕೆ ಹಾಗೂ ಆಕೆಯ ಪತಿಯ ವೈಯಕ್ತಿಕ ಖಾತೆಗೆ ವರ್ಗಾಯಿಸಿದ್ದಕ್ಕಾಗಿ ವಿವಾದಕ್ಕೆ ಸಿಲುಕಿದ್ದರು. ಸೆಟಲ್ವಾಡ್‌ರನ್ನು ಬಂಧಿಸಬೇಕೆಂಬ ಬೇಡಿಕೆಗಳು ಕೇಳಿಬಂದಿದ್ದವು. ಈ ನಡುವೆ ರಾಜ್ಯ ಸರಕಾರವು ಸೆಟಲ್ವಾಡ್ ನೇತೃತ್ವದ ಸ್ವಯಂಸೇವಾ ಸಂಸ್ಥೆಯು, ಫೋರ್ಡ್ ಪ್ರತಿಷ್ಠಾನದಿಂದ ಪಡೆದುಕೊಂಡಿದ್ದ ಆರ್ಥಿಕ ನೆರವನ್ನು ಕೋಮು ಸೌಹಾರ್ದವನ್ನು ಹದಗೆಡಿಸಲು ಬಳಸಿಕೊಳ್ಳುತ್ತಿದೆಯೆಂದು ಆರೋಪಿಸಿ ತನಿಖೆಗೆ ಆದೇಶಿಸಿತ್ತು.
ತೀರ್ಪಿಗೆ ದಾರಿ
ಗುಲ್ಬರ್ಗ್ ಹಿಂಸಾಚಾರದಲ್ಲಿ ಮೋದಿ ಮತ್ತಿತರರಿಗೆ ಕ್ಲೀನ್‌ಚಿಟ್ ನೀಡಿದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಝಕೀಯಾ ಅವರು ಗುಜರಾತ್ ಹೈಕೋರ್ಟ್‌ಗೆ ಸಲ್ಲಿಸಿದ ಮನವಿಯ ಕುರಿತ ಅಂತಿಮ ಆಲಿಕೆಯು 2015ರ ಆಗಸ್ಟ್ 4ರಂದು ಆರಂಭಗೊಂಡಿತು. ಪ್ರಕರಣದ ವಿಚಾರಣೆಯನ್ನು ಮೂರು ತಿಂಗಳುಗಳೊಳಗೆ ಪೂರ್ಣಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತು. ವಿಚಾರಣಾ ನ್ಯಾಯಾಲಯವು 338 ಪ್ರಾಸಿಕ್ಯೂಶನ್‌ಪರ ಸಾಕ್ಷಿಗಳ ಹೇಳಿಕೆಗಳನ್ನು ಪಡೆದುಕೊಂಡ ಬಳಿಕ 2015ರ ಸೆಪ್ಟಂಬರ್ 22ರಂದು ವಿಚಾರಣೆ ಮುಕ್ತಾಯಗೊಂಡಿತು. 2016ರ ಫೆಬ್ರವರಿಯಲ್ಲಿ ನ್ಯಾಯಾಲಯವು ಅಂತಿಮ ತೀರ್ಪಿಗೆ ತಡೆಯಾಜ್ಞೆಯನ್ನು ವಿಧಿಸಿ ತಾನು ಹೊರಡಿಸಿದ್ದ ತನ್ನ ಆದೇಶವನ್ನು ಹಿಂದೆಗೆದುಕೊಂಡಿತು.
ಹೀಗೆ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ವಿಚಾರಣೆ ಪೂರ್ಣಗೊಂಡ ಎಂಟು ತಿಂಗಳಿಗೂ ಅಧಿಕ ಸಮಯದ ಬಳಿಕ, ಜೂನ್ 2ರಂದು, ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಬಿ. ದೇಸಾಯಿ ತೀರ್ಪನ್ನು ಘೋಷಿಸಿದರು. ವಿಚಾರಣಾ ನ್ಯಾಯಾಲಯವು 24 ಮಂದಿ ಆರೋಪಿಗಳನ್ನು ಅಪರಾಧಿಗಳೆಂದು ಪರಿಗಣಿಸಿ, ಇತರ 34 ಮಂದಿಯನ್ನು ದೋಷಮುಕ್ತಗೊಳಿಸಿತು.
ಪ್ರಕರಣದ 24 ಮಂದಿ ದೋಷಿಗಳ ಪೈಕಿ 11 ಮಂದಿಯ ವಿರುದ್ಧ ಕೊಲೆ ಆರೋಪ ಹಾಗೂ ವಿಎಚ್‌ಪಿ ನಾಯಕ ಅತುಲ್ ವೈದ್ಯ ಸೇರಿದಂತೆ ಉಳಿದ 13 ಮಂದಿಯ ಮೇಲೆ ಕಡಿಮೆ ತೀವ್ರತೆಯ ಆರೋಪಗಳನ್ನು ಹೊರಿಸಲಾಗಿತ್ತು.
ಪ್ರಕರಣದಲ್ಲಿ ಸಿಟ್ ಒಟ್ಟು 66 ಮಂದಿಯನ್ನು ಆರೋಪಿಗಳೆಂದು ಹೆಸರಿಸಿತ್ತು. ಅವರಲ್ಲಿ ಆರು ಮಂದಿ ವಿಚಾರಣೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಹಾಗೂ ಇತರ 9 ಮಂದಿ ಕಳೆದ 14 ವರ್ಷಗಳಿಂದ ಜೈಲಿನಲ್ಲಿದ್ದರೆ, ಉಳಿದವರು ಜಾಮೀನಿನಲ್ಲಿದ್ದರು.







