ಗುಲ್ಬರ್ಗ್ ಹತ್ಯಾಕಾಂಡ ತೀರ್ಪು ಪ್ರಕಟ: 11 ದೋಷಿಗಳಿಗೆ ಜೀವಾವಧಿ

ಇತರ 12 ಜನರಿಗೆ ಏಳು ವರ್ಷ ಜೈಲು
ಇನ್ನೋರ್ವನಿಗೆ 10 ವರ್ಷಗಳ ಜೈಲು ಶಿಕ್ಷೆ
ಹತ್ಯಾಕಾಂಡದಲ್ಲಿ 69 ಜನರು ಕೊಲ್ಲಲ್ಪಟ್ಟಿದ್ದರು
ಮೇಲ್ಮನವಿ ಸಲ್ಲಿಸಲು ಝಕೀಯಾ ಜಾಫ್ರಿ ಸಜ್ಜು
ಅಹ್ಮದಾಬಾದ್,ಜೂ.17: 69 ಜೀವಗಳನ್ನು ಬಲಿ ತೆಗೆದುಕೊಂಡಿದ್ದ 2002ರ ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದಲ್ಲಿ ದೋಷಿಗಳಿಗೆ ಇಲ್ಲಿಯ ವಿಶೇಷ ಸಿಟ್ ನ್ಯಾಯಾಲಯವು ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಮತ್ತು 12 ಅಪರಾಧಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇನ್ನೋರ್ವ ಅಪರಾಧಿ 10 ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯಬೇಕಾಗಿದೆ.
14 ವರ್ಷಗಳಷ್ಟು ಹಳೆಯದಾದ ಈ ಪ್ರಕರಣದಲ್ಲಿ 24 ಜನರನ್ನು ದೋಷಿಗಳೆಂದು ನ್ಯಾಯಾಲಯವು ಜೂ.2ರಂದು ಘೋಷಿಸಿತ್ತು. ಈ ಪೈಕಿ 11 ಜನರ ವಿರುದ್ಧ ಕೊಲೆ ಆರೋಪ ರುಜುವಾತಾಗಿತ್ತು.
2002,ಫೆ.28ರಂದು ಗುಜರಾತಿನಲ್ಲಿ ನಡೆದಿದ್ದ ಕೋಮು ಹಿಂಸಾಚಾರದ ಸಂದರ್ಭ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಜನರು ಬರ್ಬರವಾಗಿ ಹತ್ಯೆಯಾಗಿದ್ದರು.
ದೋಷಿಗಳಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣ ತನಗೆ ತೃಪ್ತಿಯನ್ನು ನೀಡಿಲ್ಲ ಎಂದು ಹೇಳಿದ ಹತ ಸಂಸದರ ಪತ್ನಿ ಝಕೀಯಾ ಜಾಫ್ರಿ,ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವುದಾಗಿ ತಿಳಿಸಿದರು.
ಅಷ್ಟೊಂದು ಜೀವಗಳು ಬಲಿಯಾಗಿವೆ....ಆದಾಗ್ಯೂ ನ್ಯಾಯಾಲಯದ ನಿರ್ಧಾರ ಇಷ್ಟೇನೇ..? ನಾನು ಇದರ ವಿರುದ್ಧ ಹೋರಾಡಬೇಕಿದೆ ಎಂದರು.
ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರು ತೀರ್ಪನ್ನು ಸ್ವಾಗತಿಸಿದರಾದರೂ ಕಡಿಮೆ ಶಿಕ್ಷೆಯ ಪ್ರಮಾಣಕ್ಕೆ ನಿರಾಶೆಯನ್ನು ವ್ಯಕ್ತಪಡಿಸಿದರು.
ಕೆಲವು ದೋಷಿಗಳಿಗೆ ಜೀವಾವಧಿ ಶಿಕ್ಷೆಯ ಬದಲು ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಿರುವುದರ ವಿರುದ್ಧ ನಾವು ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದರು.
ತಮ್ಮವರು ಅಮಾಯಕರಾಗಿದ್ದು, ಶಿಕ್ಷೆಯನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ದೋಷಿಗಳ ಸಂಬಂಧಿಕರು ಹೇಳಿದರು.
ಮುಖ್ಯ ಆರೋಪಿ ಹಾಗೂ ಬಿಜೆಪಿ ಕೌನ್ಸಿಲರ್ ಬಿಪಿನ್ ಪಟೇಲ್ ಸೇರಿದಂತೆ 36 ಜನರನ್ನು ಖುಲಾಸೆಗೊಳಿಸುವ ವೇಳೆ ನ್ಯಾ.ಪಿ.ಬಿ.ದೇಸಾಯಿ ಅವರು, ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದ ಗುಲ್ಬರ್ಗ್ ಸೊಸೈಟಿ ಮೇಲಿನ ದಾಳಿ ಪೂರ್ವಯೋಜಿತವಾಗಿತ್ತು ಎಂಬ ವಾದವನ್ನು ತಿರಸ್ಕರಿಸಿದ್ದರು.
2002,ಫೆ.27ರಂದು ಗೋಧ್ರಾ ರೈಲು ನಿಲ್ದಾಣದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗೆ ಬೆಂಕಿ ಹಚ್ಚಲ್ಪಟ್ಟು 59 ಹಿಂದೂ ಕಾರ್ಯಕರ್ತರು ಸಾವನ್ನಪ್ಪಿದ್ದರು. ಮಾರನೆ ದಿನವೇ ಶಸ್ತ್ರಸಜ್ಜಿತರಾಗಿದ್ದ ಜನರ ಗುಂಪೊಂದು ಗುಲ್ಬರ್ಗ್ ಸೊಸೈಟಿಯ 29 ಬಂಗಲೆಗಳು ಮತ್ತು 10 ಅಪಾರ್ಟ್ ಮೆಂಟ್‌ಗಳ ಮೆಲೆ ದಾಳಿ ನಡೆಸಿತ್ತು. ಈ ಘಟನೆ ಗುಜರಾತ್ ಕೋಮು ಹಿಂಸಾಚಾರದ ಅತ್ಯಂತ ಭೀಕರ ಪ್ರಕರಣಗಳಲ್ಲೊಂದಾಗಿತ್ತು. ಕೋಮು ದಂಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದಂತೆ 1,000ಕ್ಕೂ ಅಧಿಕ ಜನರು ಕೊಲ್ಲಲ್ಪಟ್ಟಿದ್ದರು.







