ದಿಲ್ಲಿ ವಿಮಾನ ನಿಲ್ದಾಣದಲ್ಲಿ ಈವರೆಗೆ 24 ಕೆಜಿ ಚಿನ್ನಕ್ಕೆ ಕನ್ನ!
ಕಸ್ಟಮ್ಸ್ ಅಧಿಕಾರಿಗಳ ಮೇಲೆ ಸಂಶಯ
![ದಿಲ್ಲಿ ವಿಮಾನ ನಿಲ್ದಾಣದಲ್ಲಿ ಈವರೆಗೆ 24 ಕೆಜಿ ಚಿನ್ನಕ್ಕೆ ಕನ್ನ! ದಿಲ್ಲಿ ವಿಮಾನ ನಿಲ್ದಾಣದಲ್ಲಿ ಈವರೆಗೆ 24 ಕೆಜಿ ಚಿನ್ನಕ್ಕೆ ಕನ್ನ!](https://www.varthabharati.in/sites/default/files/images/articles/2016/06/18/52803599.jpg)
ಹೊಸದಿಲ್ಲಿ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಭದ್ರತಾ ಕೊಠಡಿಗೆ ಸರ್ಪಗಾವಲು ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಲ್ಲಿ ಇಟ್ಟಿದ್ದ 24 ಕೆ.ಜಿ. ಚಿನ್ನ ಮಾಯವಾಗಿದೆ. ಕಳೆದ ಮಂಗಳವಾರ, ವಶಪಡಿಸಿಕೊಂಡಿದ್ದ ಚಿನ್ನ ಭದ್ರತಾ ಕೊಠಡಿಯಿಂದ ನಾಪತ್ತೆಯಾಗಿರುವುದು ಇತ್ತೀಚಿನ ಬೆಳವಣಿಗೆ.
ಮಂಗಳವಾರ ಸಾಮಾನ್ಯ ತಪಾಸಣೆ ಕೈಗೊಂಡಾಗ, ಮುಚ್ಚಿದ ಲಕೋಟೆಗಳಲ್ಲಿ ಇಡಲಾಗಿದ್ದ ಚಿನ್ನದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಸಮಗ್ರ ಶೋಧನೆ ಕೈಗೊಂಡಾಗ 24 ಕೆ.ಜಿ. ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬಿಳಿ ಬಟ್ಟೆಯಲ್ಲಿ ಸುತ್ತಿಡಲಾಗಿದ್ದ 1.27 ಕೆ.ಜಿ ಚಿನ್ನದ ಪ್ಯಾಕೆಟ್ ನ ತೂಕದಲ್ಲಿ ವ್ಯತ್ಯಾಸ ಕಂಡುಬಂದಿದೆ. ಆದರೆ ಏರ್ ಕಸ್ಟಮ್ಸ್ ಎಂಬ ಮುದ್ರೆ ಸಮರ್ಪಕವಾಗಿಯೇ ಇದೆ. ಪ್ಯಾಕೆಟ್ ನ ಮೇಲಿದ್ದ ವಿವರಗಳ ಪ್ರಕಾರ, 1989ರ ಜುಲೈ 24ರಂದು ಇಬ್ರಾಹಿಂ ಹನೀಫಾ ಎಂಬುವವರಿಂದ ವಶಪಡಿಸಿಕೊಂಡಿದ್ದು ಎಂದು ನಮೂದಿಸಲಾಗಿದೆ ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಪ್ಯಾಕೆಟ್ ತೆರೆದು ನೋಡಿದಾಗ, ಅಚ್ಚರಿ ಕಾದಿತ್ತು. ಒಂದು ಕೆ.ಜಿ.ಗೂ ಅಧಿಕ ಚಿನ್ನ ಅದರಲ್ಲಿ ಇರಬೇಕಿತ್ತು. ಆದರೆ 500 ಗ್ರಾಂನ ಒಂದು ಬಿಸ್ಕತ್ ಮಾತ್ರ ಇತ್ತು.
ಈ ಬಗ್ಗೆ ದೂರು ದಾಖಲಿಸಲಾಗಿದೆ. ಬಹುತೇಕ ಚಿನ್ನ ನಾಪತ್ತೆ ಪ್ರಕರಣಗಳಲ್ಲಿ ಚಿನ್ನವನ್ನು ಮಾಯ ಮಾಡಿ, ಬೇರೆ ಲೋಹವನ್ನು ಇಡಲಾಗುತ್ತಿತ್ತು ಎಂದು ಡಿಸಿಪಿ ದಿನೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ. ಕಳೆದ 20 ವರ್ಷಗಳಲ್ಲಿ ಈ ಭದ್ರತಾ ಕೊಠಡಿಯ ಭದ್ರತಾ ಹೊಣೆ ಹೊತ್ತಿರುವ ಅಧಿಕಾರಿಗಳ ಪಟ್ಟಿಯನ್ನು ಕೇಳಲಾಗಿದೆ. ತನಿಖೆಯಲ್ಲಿ ಸಹಕರಿಸುವಂತೆ ಎಲ್ಲರನ್ನೂ ಕೇಳಲಾಗಿದೆ ಎಂದು ವಿವರಿಸಿದರು.
ಇತ್ತೀಚಿನ ನಾಪತ್ತೆ ಪ್ರಕರಣವನ್ನೂ ಗಣನೆಗೆ ತೆಗೆದುಕೊಂಡರೆ ಒಟ್ಟು 7 ಕೋಟಿ ರೂಪಾಯಿ ಮೌಲ್ಯದ 24 ಕೆ.ಜಿ. ಚಿನ್ನ ನಾಪತ್ತೆಯಾಗಿದೆ. ಆದರೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿರುವುದು 11 ಕೆ.ಜಿ. ಚಿನ್ನದ ಬಗ್ಗೆ ಮಾತ್ರ.