2016ರ ದಶಂಬರ ತಿಂಗಳಲ್ಲಿ ವಿಶ್ವ ತುಳುವೆರೆ ಆಯನೊ ಕೂಟೊ
ಮಂಗಳೂರು,ಜೂ.18:ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಅಖಿಲ ಭಾರತ ತುಳು ಒಕ್ಕೂಟ, ಕೇರಳ ತುಳು ಅಕಾಡಮಿ ಹಾಗೂ ಪ್ರಸಾರ ಭಾರತಿ ಬ್ರಾಡ್‌ಕಾಸ್ಟ್ ಕಾರ್ಪೋರೇಶನ್- ಆಕಾಶವಾಣಿ ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು, ಒಡಿಯೂರು ಗ್ರಾಮ ವಿಕಾಸ ಯೋಜನೆ ಕಾಸರಗೋಡು, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಶ್ವ ತುಳುವೆರೆ ಆಯನೊ ಕೂಟೊವನ್ನು ದಶಂಬರ್ 9ರಿಂದ 13ರವರೆಗೆ ಬದಿಯಡ್ಕದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ವಿಶ್ವ ತುಳು ಸಾಂಸ್ಕೃತಿಕ ಸಮ್ಮೇಳನವು ವಿವಿಧ ಕಾರ್ಯಕ್ರಮದೊಂದಿಗೆ ನಡೆಯಲಿದೆ. ತುಳುನಾಡಿನ ಜಾತಿ, ಮತ, ಭಾಷಾ ಸೌಹಾರ್ದತೆ ಎಂಬ ಧ್ಯೇಯೋದ್ದೇಶದೊಂದಿಗೆ ಕಾರ್ಯಕ್ರಮ ನಡೆಸಲಾಗುವುದು. ವಿವಿಧ ಜಾತಿ, ಮತ, ಭಾಷೆಗಳನ್ನೊಳಗೊಂಡ ಜನಮೈತ್ರಿ ಕಾರ್ಯಕ್ರಮ, ಕನ್ನಡ, ಮಲಯಾಳ, ಕೊಂಕಣಿ, ಮರಾಠಿ, ಬ್ಯಾರಿ, ಉರ್ದು, ಕರ್ಹಾಡ, ಕೊಡವ, ಕುಂದಗನ್ನಡ, ಅರೆಗನ್ನಡ, ಮಾಪಿಳ್ಳೆ, ಹವ್ಯಕ, ಮಾವಿಲ ಮೊದಲಾದ ಭಾಷೆಗಳ ಬಹುಭಾಷಾ ಸಂಗಮ- ತುಳುನಾಡಿನ ದೈವಾರಾಧನೆ ನಿನ್ನೆ-ಇಂದು-ನಾಳೆ ವಿವಿಧ ಗೋಷ್ಟಿ, ಪ್ರಾತ್ಯಕ್ಷಿಕೆಗಳು, ಜನಪದ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಪ್ರದರ್ಶನಗಳೊಂದಿಗೆ ಜರುಗಲಿದೆ ಎಂದು ತಿಳಿಸಿದರು.
ತುಳುಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇಧದಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳು ಮೊದಲಾದ ನೂತನ ಪರಿಕಲ್ಪನೆಯೊಂದಿಗೆ ಸಮ್ಮೇಳನ ಮೂಡಿಬರಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ, ನಿಟ್ಟೆ ಶಶಿಧರ ಶೆಟ್ಟಿ, ಡಾ.ರಾಜೇಶ್ ಆಳ್ವ ಉಪಸ್ಥಿತರಿದ್ದರು.







