ಆನೆ ದಾಳಿಯಲ್ಲಿ ಮೃತಪಟ್ಟ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ

ಸುಳ್ಯ,ಜೂ.18: ಬಿಸಿಲೆ ಘಾಟಿಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಬೈಕ್ ಸವಾರನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 5 ಲಕ್ಷ ರೂಪಾಯಿ ಪರಿಹಾರ ಧನವನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ವಿತರಿಸಿದರು.
ಮಡಿಕೇರಿಗೆ ಹೋಗುವ ದಾರಿಯಲ್ಲಿ ಸುಳ್ಯದ ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ ರಮಾನಾಥ ರೈ ಅವರು ಆನೆ ದಾಳಿಯಿಂದ ಮೃತಪಟ್ಟ ಬೈಕ್ ಸವಾರ ಹಾಸನ ಜಿಲ್ಲೆ ಶಾಂತಿಗ್ರಾಮ ಹೋಬಳಿಯ ಸಮುದ್ರವಳ್ಳಿಯ ಗಣೇಶ್ ಅವರ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ವಿತರಿಸಿದರು. ಗಣೇಶ್ ಅವರ ತಾಯಿ ಶಾರದಮ್ಮ, ಅಜ್ಜ ರಾಮಾನುಜಂ, ಚಿಕ್ಕಪ್ಪ ಜಯರಾಮ ಪರಿಹಾರದ ಚೆಕ್ ಸ್ವೀಕರಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ವಲಯಾರಣ್ಯಾಧಿಕಾರಿ ಪ್ರಶಾಂತ್ ಪೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ತಾಲೂಕು ಪಂಚಾಯತ್ ಸದಸ್ಯ ಅಶೋಕ್ ನೆಕ್ರಾಜೆ ಮೊದಲಾದವರಿದ್ದರು. ಅರಣ್ಯ ಅಧಿಕಾರಿಗಳು ತಡ ಮಾಡದೆ ಪರಿಹಾರ ವಿತರಣೆ ಮಾಡಿದ್ದಾರೆ. ಯಾವುದೇ ಅಲೆದಾಟ ನಡೆಸಿಲ್ಲ ಎಂದು ಮೃತ ಗಣೇಶ್ ಅವರ ಚಿಕ್ಕಪ್ಪ ಜಯರಾಮ ಇಲಾಖಾ ಅಧಿಕಾರಿಗಳ ಕ್ರಮವನ್ನು ಶ್ಲಾಘಿಸಿದರು.





