ಗೋವಾ ಜೀಪು ಅಪಘಾತ : ಕಲ್ಮಕಾರಿನಲ್ಲಿ ಇನ್ನೂ ಆಘಾತ
ಪೋಷಕರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದ ಸಂಸದರು

ಸುಳ್ಯ,ಜೂ.18: ಗೋವಾ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಮ್ಮೂರಿನ ಮೂವರು ಜನಾನುರಾಗಿ ಯುವಕರು ಸಾವನ್ನಪ್ಪಿದ ಆಘಾತದಿಂದ ಕಲ್ಮಕಾರು ಹೊರಬಂದಿಲ್ಲ. ಮತ್ತೊಂದೆಡೆ ಮನೆಯ ಆಧಾರಸ್ತಂಭಗಳೇ ಕುಸಿದ ಮನೆಯಲ್ಲೀಗ ನೀರವ ಮೌನ ಆವರಿಸಿದೆ.
ಕಲ್ಮಕಾರು ಗ್ರಾಮದ ಉಳುವಾರು ಮೋಹನ ಗೌಡರ ಮಗ ಪ್ರದೀಪ್ ಎಂಬವರ ಜೀಪಿನಲ್ಲಿ ಪ್ರದೀಪ್, ಅವರ ತಮ್ಮ ಸುದೀಪ್, ಮೆಂಟೆಕಜೆ ಕುಶಾಲಪ್ಪ ಗೌಡರ ಪುತ್ರ ಚರಣ್, ಅಗಲಡ್ಕ ಶಿವರಾಮ ಗೌಡರ ಪುತ್ರ ಸೋಮಶೇಖರ, ಗುಡ್ಡನಮನೆ ದಿ.ಚಿನ್ನಪ್ಪ ಗೌಡರ ಪುತ್ರ ಪುನೀತ್, ದಿ. ಪಡ್ಪು ಜಗನ್ನಾಥ ಗೌಡರ ಪುತ್ರ ಹರ್ಷಿತ್, ಗದ್ದೆಮನೆ ಸುರೇಶ್‌ರ ಪುತ್ರ ಹಿತೇಶ್, ಶೀರ್ಕಲ್ಲು ದಯಾನಂದರ ಪುತ್ರ ಶರತ್ ಮತ್ತು ಹುದೇರಿ ಚಂದ್ರಶೇಖರ ಗೌಡರ ಪುತ್ರ ಸವಿನ್‌ರವರು ಗೋವಾ ಪ್ರವಾಸಕ್ಕೆಂದು ಹೋಗಿದ್ದರು. ಜೂನ್ 11 ರಂದು ಬೆಳಿಗ್ಗೆ 10 ಗಂಟೆಯ ವೇಳೆಗೆ ಅವರು ಗೋವಾ ತಲುಪಿ ಹಗಲಿಡೀ ವಿಹರಿಸಿ ರಾತ್ರಿ ವೇಳೆ ವಾಪಸ್ ಹೊರಟಿದ್ದರು. ತಂಡದಲ್ಲಿದ್ದವರ ಪೈಕಿ ನಾಲ್ವರಿಗೆ ವಾಹನ ಚಾಲನೆ ಗೊತ್ತಿದ್ದರಿಂದ ಸರದಿ ಪ್ರಕಾರ ಇವರು ಜೀಪು ಚಾಲನೆ ನಡೆಸಿದ್ದರು. ಗೋವಾದಿಂದ ಹಿಂತಿರುಗುವ ವೇಳೆ ಹೊನ್ನಾವರಕ್ಕೆ ಬಂದು ಅಲ್ಲಿ ಪ್ರದೀಪರ ಪರಿಚಯಸ್ಥರಲ್ಲಿ ತಂಗಿ ಮರುದಿನ ಊರಿಗೆ ಮರಳುವ ನಿರ್ಧಾರ ಮಾಡಿದ್ದರು. ಹಾಗೆ ಹಿಂತಿರುಗುತ್ತಿದ್ದಾಗ ಮಡಗಾಂವ್ ಸಮೀಪದ ಕಾಣಕೋಣದಲ್ಲಿ ರಾತ್ರಿ ಒಂದು ಗಂಟೆ ಹೊತ್ತಿಗೆ ಕೋಳಿ ಸಾಗಾಟದ ಲಾರಿಯೊಂದು ಜೀಪಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಪರಿಣಾಮವಾಗಿ ಜೀಪಿನ ಹಿಂಬದಿ ಬಲ ಭಾಗ ಛಿದ್ರವಾಗಿದ್ದು ಅಲ್ಲಿ ಕುಳಿತಿದ್ದ ಚರಣ್, ಸೋಮಶೇಖರ ಮತ್ತು ಪುನೀತ್ ರ ತಲೆ ಭಾಗದ ಮೂಲಕ ಸರಳೊಂದು ಹಾದು ಹೋಗಿ ಗಂಭೀರ ಗಾಯಗೊಂಡು ಪುನೀತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆಗ ಜೀಪು ಚಲಾಯಿಸುತ್ತಿದ್ದ ಪ್ರದೀಪ್ ಯು.ಎಂ. ಗಾಯಗೊಂಡಿದ್ದಾರೆ. ಇತರ ಯುವಕರು ಅಲ್ಪ-ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಅವರು ಆಗಲೇ ಊರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಅಪಘಾತದ ಸುದ್ದಿ ತಿಳಿದ ಕೂಡಲೇ 2 ತಂಡಗಳಲ್ಲಿ ಸಂಬಂಧಿಕರು ಗೋವಾಕ್ಕೆ ಹೋಗಿದ್ದಾರೆ. ಒಂದು ತಂಡದಲ್ಲಿ ಮೃತರ ಸಂಬಂಧಿಗಳು ಹೋದರೆ, ಮತ್ತೊಂದು ತಂಡದಲ್ಲಿ ತಾಲೂಕು ಪಂಚಾಯತ್ ಸದಸ್ಯ ಉದಯ ಕೊಪ್ಪಡ್ಕ ಮತ್ತಿತರರಿದ್ದರು. ಸೋಮವಾರ ಮಧ್ಯರಾತ್ರಿ ವೇಳೆ ಮೃತದೇಹಗಳನ್ನು ಕಲ್ಮಕಾರಿಗೆ ತಂದು ಅವರವರ ಮನೆಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗೋವಾಕ್ಕೆ ಹೋದ ಯುವಕರು ಪರಸ್ಪರ ಒಂದೇ ಊರಿನ ಗೆಳೆಯರಾಗಿದ್ದು 25 ವರ್ಷ ಪ್ರಾಯದ ಒಳಗಿನವರು. ಖುಷಿಯಿಂದ ಹೋಗಿದ್ದ ಯುವಕರು ದುರ್ಘಟನೆಗೊಳಗಾಗಿರುವ ಸುದ್ದಿ ತಿಳಿದು ಇಡೀ ಕಲ್ಮಕಾರು ಕೊಲ್ಲಮೊಗ್ರ ಗ್ರಾಮಗಳ ಜನತೆ ಆಘಾತಕ್ಕೊಂಡಿದ್ದು ಇನ್ನೂ ಚೇತರಿಸಿಕೊಂಡಿಲ್ಲ. ಗುಡ್ಡನಮನೆ ದಿ. ಚಿನ್ನಪ್ಪ ಗೌಡರ ಪುತ್ರ ಪುನೀತ್ ಮನೆಯ ಆಧಾರಸ್ತಂಭವಾಗಿದ್ದ. ಚಿನ್ನಪ್ಪ ಗೌಡರು ಎರಡು ವರ್ಷದ ಹಿಂದೆ ತೀರಿಕೊಂಡ ಬಳಿಕ ಪುನೀತ್ ಮನೆಯನ್ನು ನೋಡಿಕೊಳ್ಳುತ್ತಿದ್ದ. ಕೆಲವು ಸಮಯದ ಹಿಂದಷ್ಟೇ ಮಂಗಳೂರಿನಲ್ಲಿ ಏರ್‌ಟೆಲ್ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.
ಪುನೀತ್ ತಾಯಿ ಮತ್ತು ತಮ್ಮನನ್ನು ಅಗಲಿದ್ದಾರೆ. ಆರ್ಥಿಕವಾಗಿ ತೀರಾ ಬಡತನದಲ್ಲಿರುವ ಈ ಕುಟುಂಬದ ಹೆಸರಿನಲ್ಲಿ ಸ್ವಂತ ಜಾಗ ಕೂಡಾ ಇಲ್ಲ. ಇರುವ ಜಾಗ ಅರಣ್ಯಕ್ಕೆ ಸೇರಿದ್ದಾಗಿದೆ.ಅಗಲಡ್ಕ ಶಿವರಾಮ ಗೌಡರ ಏಕಮಾತ್ರ ಪುತ್ರ ಸೋಮಶೇಖರ ಗಾರೆ ಕೆಲಸ ಮಾಡಿಕೊಂಡಿದ್ದರು. ಓರ್ವ ತಂಗಿ ಮಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದಾರೆ. ಮನೆಯಲ್ಲಿರುವುದು ಶಿವರಾಮ ಗೌಡ ಮತ್ತು ಅನಾರೊಗ್ಯ ಪೀಡಿತರಾಗಿರುವ ಅವರ ಪತ್ನಿ. ಮೆಂಟೆಕಜೆ ಕುಶಾಲಪ್ಪ ಗೌಡರ ಪುತ್ರ ಚರಣ್‌ರನ್ನು ಊರಿಗೆ ಊರೇ ಕೊಂಡಾಡುತ್ತದೆ. ಎಲ್ಲ ಕೆಲಸಗಳನ್ನೂ ಬಲ್ಲ ಚರಣ್ ಅತ್ಯಂತ ಶ್ರಮಜೀವಿ. ಇಲಾಖೆಗಳಿಂದ ದೊರೆಯುವ ಎಲ್ಲ ಸೌಲಬ್ಯಗಳನ್ನು ಸದುಪಯೋಗಪಡಿಕೊಂಡು ಕೃಷಿ, ಹೈನುಗಾರಿಕೆಯನ್ನು ಯಶಸ್ವಿಯಾಗಿ ನಡೆಸಿದ್ದರು. ಹೀಗೆ ಖುಷಿಗಾಗಿ ತೆರಳಿದ ತಂಡದ ಮೂವರು ಲೋಕವನ್ನೇ ಬಿಟ್ಟಗಲಿ ಕುಟುಂಬಕ್ಕೂ, ಊರಿಗೂ ನೋವು ತಂದಿರುವುದು ವಿಧಿಯ ವಿಪರ್ಯಾಸವಲ್ಲದೆ ಮತ್ತೇನು. ? ಗೋವಾ ಪ್ರವಾಸಕ್ಕೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಜೀಪು ಅಪಘಾತದಲ್ಲಿ ಮೃತಪಟ್ಟ ಕಲ್ಮಕಾರಿನ ಮೂವರು ಯವಕರ ಮನೆಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಜನಪ್ರತಿನಿಧಿಗಳು, ರಾಜಕೀಯ ನಾಯಕರು ಗುರುವಾರ ಭೇಟಿ ನೀಡಿದರು.
ಸಂಸದರ ಭೇಟಿ:
ಸಂಸದ ನಳಿನ್ ಕುಮಾರ್ ಕಟೀಲ್‌ರವರು ಮೃತಪಟ್ಟ ಪುನೀತ್, ಸೋಮಶೇಖರ ಹಾಗೂ ಚರಣ್ ಅವರ ಮನೆಗಳಿಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಸುದ್ದಿ ಚಾನೆಲ್ ನೊಂದಿಗೆ ಮಾತನಾಡಿದ ಸಂಸದರು, ಸಮಾಜಮುಖಿಯಾಗಿದ್ದ ಮೂವರು ಯುವಕರ ಅಕಾಲಿಕ ಅಗಲಿಕೆ ನೋವು ತರುವಂಥದ್ದು. ಆರ್ಥಿಕವಾಗಿ ಹಿದುಳಿದ ಈ ಕುಟುಂಬಗಳ ನೆರವಿಗೆ ಪ್ರಯತ್ನಿಸುವುದಾಗಿ ಹೇಳಿದರು. ಶಾಸಕ ಎಸ್.ಅಂಗಾರ, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲೂಕು ಪಂಚಾಯತ್ ಸದಸ್ಯ ಉದಯ ಕೊಪ್ಪಡ್ಕ, ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಅಧ್ಯಕ್ಷೆ ವೀಣಾ ಬಿಳಿಮಲೆ, ಹರಿಹರ ಗ್ರಾಮ ಪಂಚಾಯತ್ ಅಧ್ಯಕ್ಷೆ ಹಿಮ್ಮತ್ ಕೆ.ಸಿ., ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಜೆಪಿ ನಾಯಕರಾದ ಮುಳಿಯ ಕೇಶವ ಭಟ್, ಶೈಲೇಶ್ ಅಂಬೆಕಲ್ಲು, ವೆಂಕಟ್ ವಳಲಂಬೆ, ಕೊಲ್ಲಮೊಗ್ರ ಗ್ರಾಮಪಂಚಾಯತ್ ಉಪಾಧ್ಯಕ್ಷ ಮಣಿಕಂಠ ಕಟ್ಟ, ಸದಸ್ಯ ಟಿ.ಎನ್.ಸತೀಶ್ ಮೊದಲಾದವರು ಈ ಸಂದರ್ಭದಲ್ಲಿದ್ದರು.







