ವಿದ್ಯೆಯ ಜತೆಗೆ ಆಧುನಿಕ ಕೃಷಿಯೆಡೆಗೆ ಒಲವು ಇರಲಿ :ಸಚಿವ ಅಭಯಚಂದ್ರ ಜೈನ್
ವಲಯ ಮಟ್ಟದ "ಶಾಲಾ ತೋಟದಲ್ಲಿ ತರಕಾರಿ ಬೆಳೆ" ಉದ್ಘಾಟನೆ

ಮೂಡುಬಿದಿರೆ,ಜೂ.18 : ಕೃಷಿ ನಮ್ಮ ಜೀವನಾಡಿ. ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಆಧುನಿಕ ಕೃಷಿಯೆಡೆಗೂ ಆಸಕ್ತಿ ವಹಿಸಿದರೆ ಉತ್ತಮ ಕೃಷಿಕರಾಗಿ ಮೂಡಿ ಬರಲು ಸಾಧ್ಯವಿದೆ ಎಂದು ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಡುಬಿದಿರೆ ವಲಯ ರೈತ ಸಂಘ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ಅಲಂಗಾರು ಸೈಂಟ್ ಥೋಮಸ್ ಶಾಲೆಯ ಇಕೋ ಕ್ಲಬ್‌ನ ನೇತೃತ್ವದಲ್ಲಿ ಶಾಲಾ ಸಭಾಭವನದಲ್ಲಿ ಶನಿವಾರ ನಡೆದ "ಶಾಲಾ ತೋಟದಲ್ಲಿ ತರಕಾರಿ ಬೆಳೆ" ಕಾರ್ಯಕ್ರಮವನ್ನು ತರಕಾರಿ ಬೀಜವನ್ನು ಬಿತ್ತನೆ ಮಾಡುವ ಮೂಲಕ ಉದ್ಘಾಟಿಸುವ ಮೂಲಕ ವಲಯ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರೈತ ಸಂಘವು ಆಧುನಿಕ ಪದ್ಧತಿಯೊಂದಿಗೆ ಸಾವಯವ ಗೊಬ್ಬರವನ್ನು ಬಳಸಿ ಪ್ರತಿ ಶಾಲೆಗಳಲ್ಲಿಯೂ ತರಕಾರಿ ಕೃಷಿಯನ್ನು ಮಾಡಲು ಪ್ರೋತ್ಸಾಹ ನೀಡುತ್ತಿದ್ದು ಇದರಿಂದಾಗಿ ಮಕ್ಕಳಿಗೆ ಉತ್ತಮ ಆರೋಗ್ಯದ ಜತೆಗೆ ಕೃಷಿಯ ಬಗ್ಗೆ ಒಲವು ಮೂಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಶಾಲಾ ಸಂಚಾಲಕ, ಅಲಂಗಾರು ಚರ್ಚಿನ ಧರ್ಮಗುರು ರೆ.ಫಾ ಬೇಸಿಲ್ ವಾಸ್ ಅಧ್ಯಕ್ಷತೆ ವಹಿಸಿ, ಇಕೋ ಕ್ಲಬ್ ನ ಅಧ್ಯಕ್ಷ ಮೆವಿಲ್ ಡೇಸಾ ಅವರಿಗೆ ದಾಖಲೆ ಪುಸ್ತಕವನ್ನು ಹಸ್ತಾಂತರಿಸಿ ಮಾತನಾಡಿ ತರಕಾರಿಯನ್ನು ಸೇವಿಸುವುದರಿಂದ ಆರೋಗ್ಯವಂತರಾಗಿರುತ್ತೇವೆ. ಶಾಲೆಗಳಲ್ಲಿ ಬಿಸಿಯೂಟಕ್ಕೆ ತರಕಾರಿಯನ್ನು ಬಳಸುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಬುದ್ಧಿಮತ್ತೆಯೂ ಹೆಚ್ಚಾಗುತ್ತದೆ ಎಂದು ಹೇಳಿದ ಅವರು ತರಕಾರಿ ಬೆಳೆಯಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ಮಾಡುವ, ರೈತ ಸಂಘವು ಗುರುತಿಸುವ ಶಾಲೆಗೆ ವೈಯಕ್ತಿಕ ನೆಲೆಯಲ್ಲಿ ಬಹುಮಾನವನ್ನು ನೀಡಲಾಗುವುದು ಎಂದು ಘೋಷಿಸಿದರು.
ಪುರಸಭಾ ಅಧ್ಯಕ್ಷೆ ರೂಪಾ ಎಸ್.ಶೆಟ್ಟಿ, ಸದಸ್ಯ ಪಿ.ಕೆ ತೋಮಸ್, ಪತ್ರಕರ್ತರ ಸಂಘದ ಅಧ್ಯಕ್ಷ ಧನಂಜಯ ಮೂಡುಬಿದಿರೆ, ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೈಂಟ್ ತೋಮಸ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಐರಿನ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಹೆಲನ್ ಉಪಸ್ಥಿತರಿದ್ದರು.
ರೈತ ಸಂಘದ ಅಧ್ಯಕ್ಷ ಹೆಚ್.ಧನಕೀರ್ತಿ ಬಲಿಪ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಜಿಲ್ಲೆಯಲ್ಲಿ ಕೃಷಿಯು ಕ್ಷೀಣಿಸುತ್ತಿದೆ ಮತ್ತು ರಾಸಾಯನಿಕ ಗೊಬ್ಬರವನ್ನು ಬಳಸುವುದರಿಂದ ಆರೋಗ್ಯವೂ ಕ್ಷೀಣಿಸುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ವಲಯದ 10 ಪ್ರೌಢಶಾಲೆಗಳಲ್ಲಿ, 20 ಪ್ರಾಥಮಿಕ ಶಾಲೆಗಳಲ್ಲಿ ತರಕಾರಿ ಬೆಳೆಯನ್ನು ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇಕೋ ಕ್ಲಬ್‌ನ ಸದಸ್ಯೆ ರಿತಿಕಾ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್‌ನ ಕಾರ್ಯದರ್ಶಿ ಗ್ಲೇನ್ ಕ್ಲಿಟನ್ ವಂದಿಸಿದರು.







