ಕಡಬ: ಫೈನಾನ್ಸ್ ಮಾಲಕರಿಂದ ಗಂಭೀರ ಹಲ್ಲೆ - ಆಸ್ಪತ್ರೆಗೆ ದಾಖಲು

ಕಡಬ,ಜೂ.18: ಇಲ್ಲಿನ ಶ್ರೀ ಗಣೇಶ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿವ ಶ್ರೀ ದತ್ತಕೃಪಾ ಫೈನಾನ್ಸ್ ಕಾರ್ಪೋರೇಶನ್(ರಿ.) ನ ಮಾಲಕ ಹಾಗೂ ಸಿಬ್ಬಂದಿಗಳು ಸೇರಿಕೊಂಡು ವ್ಯಕ್ತಿಯೋರ್ವರಿಗೆ ಹಲ್ಲೆ ಮಾಡಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಕಡಬದ ಪದ್ಮಶ್ರೀ ಸ್ಟುಡಿಯೋದ ಪುರುಷೋತ್ತಮ ಎಂಬವರು ಮೂವತ್ತು ಸಾವಿರ ರೂಗಳನ್ನು ಆರು ತಿಂಗಳ ಹಿಂದೆ ಸಾಲವಾಗಿ ಪಡೆದುಕೊಂಡಿದ್ದು, ಪ್ರತಿವಾರ 1200ರ ಹಾಗೆ ಬಡ್ಡಿಪಾವತಿಸುತ್ತಾ ಬಂದಿದ್ದರೆನ್ನಲಾಗಿದೆ. ಆದರೆ ಕಟ್ಟಿದ ಹಣಕ್ಕೆ ಯಾವುದೇ ರೀತಿಯ ರಶೀದಿಯನ್ನು ನೀಡಿರಲಿಲ್ಲವೆನ್ನಲಾಗಿದ್ದು, ಶನಿವಾರದಂದು ಬಡ್ಡಿ ಪಾವತಿಸಿ ಕಟ್ಟಿದ ಹಣದ ರಶೀದಿ ಕೊಡಬೇಕೆಂದು ಕೇಳಿದಾಗ ಪುರುಷೋತ್ತಮರಿಗೆ ಫೈನಾನ್ಸ್ ಮಾಲಕ ಶ್ರೀಧರ ಕೆ. ಶೆಟ್ಟಿ ಹಾಗೂ ಸಿಬ್ಬಂದಿಗಳು ಯದ್ವಾ ತದ್ವಾ ಥಳಿಸಿದ್ದಾರೆ. ಥಳಿತಕ್ಕೊಳಗಾಗಿ ಗಾಯಗೊಂಡಿರುವ ಪುರುಷೋತ್ತಮರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ಊರವರು ಫೈನಾನ್ಸ್ ಬಳಿ ಜಮಾಯಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರೊಂದಿಗೆ ಊರವರು ಆಕ್ರೋಶ ವ್ಯಕ್ತಪಡಿಸಿದರು. ಪರವೂರಿನಿಂದ ಆಗಮಿಸಿ 1000 ರೂಪಾಯಿಗೆ ವಾರಕ್ಕೆ 40 ರೂಪಾಯಿ ಬಡ್ಡಿ ಸೇರಿಸಿ ಕಡಬ ಜನರನ್ನು ಮರುಳು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಭೇಟಿ ನೀಡಿದ ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆಯವರು ಇತ್ತಂಡದವರನ್ನೂ ಠಾಣೆಗೆ ಕರೆಸಿಕೊಂಡು ಮಾತುಕತೆ ನಡೆಸಿದರು.







