ಜನರನ್ನು ದಾರಿ ತಪ್ಪಿಸುವ ಭಗವದ್ಗೀತೆ: ಎಂ.ಸಿ.ಡೋಂಗ್ರೆ
.jpg)
ಹಾಸನ, ಜೂ.18: ಭಗವದ್ಗೀತೆ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಿಮರ್ಶಕ ಚಿಂತಕ ಎಂ.ಸಿ.ಡೋಂಗ್ರೆ ಪ್ರತಿಪಾದಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕ ಹಾಗೂ ಕಸಾಪ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಂ.ಸಿ.ಡೋಂಗ್ರೆ ರಚಿತ ‘ಭಗವದ್ಗೀತೆ’ ಒಂದು ವಿಮರ್ಶೆಯ ಕೃತಿ ಬಿಡುಗಡೆ ಮತ್ತು ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಗ್ರಂಥದ ಮೂಲಕ ಇತಿಹಾಸವನ್ನೂ ತಪ್ಪಾಗಿ ಪ್ರತಿಪಾದಿಸಲಾಗಿದೆ. ಭಗವದ್ಗೀತೆಯಲ್ಲಿ ಸತ್ಯಾಂಶಗಳಿಗಿಂತ ಸುಳ್ಳುಗಳೇ ಅಧಿಕ. ಜನವಿರೋಧಿಯಾಗಿರುವ ಈ ಗ್ರಂಥದ ವಿರುದ್ಧ ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮನೋವೈದ್ಯರಾದ ಡಾ.ಸಿ.ಆರ್.ಚಂದ್ರಶೇಖರ್ ಮಾತನಾಡಿ, ಆಧಾರವಿಲ್ಲದ ಯಾವುದೇ ಸಂಗತಿ ವಿಷಯವನ್ನು ಯಾರು ನಂಬಬೇಡಿ ಎಂದು ಕರೆ ನೀಡಿದರು. ಬರವಣಿಗೆಯನ್ನು ನಾಮ ಫಲಕದಲ್ಲಿ ಬರೆಯುವ ಮೂಲಕ ಉದ್ಘಾಟಿಸಿ ನಂತರ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದ ಸುಜಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನದ ವಿಚಾರವಾಗಿ ಕೆಲವು ಪ್ರಶ್ನೆಗಳನ್ನು ಕೇಳುವುದರ ಮೂಲಕ ಗಮನಸೆಳೆದರು. ಕೃತಿ ಪರಿಚಯವನ್ನು ಸಮಿತಿಯ ತಾಲೂಕು ಅಧ್ಯಕ್ಷ ಝುಲ್ಫಿಕರ್ ಅಹ್ಮದ್ ನಡೆಸಿಕೊಟ್ಟರು. ಹೊಳೆನರಸೀಪುರ ಕೆಜೆವಿಎಸ್ ತಂಡ, ದೊಡ್ಡಳ್ಳಿ ರಮೇಶ್ ಮತ್ತು ತಂಡ ಹಾಗೂ ಕುಮಾರ್ ಕಟ್ಟೆಬೆಳಗುಳಿ ತಂಡ ವಿಜ್ಞಾನ ಗೀತೆ ಹಾಡಿದರು.
ಇದೆ ವೇಳೆ ಕರ್ನಾಟಕ ಜ್ಞ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಗ್ಯಾರಂಟಿ ರಾಮಣ್ಣ, ಸುವರ್ಣ ಲೇಡಿಸ್ ಕ್ಲಬ್‌ನ ವೇದಶ್ರೀ, ಅಂಬೇಡ್ಕರ್ ಯುವ ಸೇನೆಯ ನಾಗರಾಜ್ ಹೆತ್ತೂರ್, ಬಸವರಾಜ್, ರವೀಂದ್ರನಾಥ್, ಮುರುಳಿಧರ್, ವಿಶ್ವಾನಾಥ್ ಮೊದಲಾದವರು ಉಪಸ್ಥಿತರಿದ್ದರು.





