ಕಳಪೆ ಗುಣಮಟ್ಟದಲ್ಲಿ ಗಿರಿಜನರ ಆಶ್ರಮ ಶಾಲೆ ಕಟ್ಟಡ
ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಒತ್ತಾಯ
ಕುಶಾಲನಗರ, ಜೂ. 18: ಇಲ್ಲಿನ ಸಮೀಪದಲ್ಲಿ ವಸತಿ ಶಾಲಾ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಈ ಕಟ್ಟಡಕ್ಕೆ ಬುನಾದಿ ಹೇಗೆ ಹಾಕಿದ್ದಾರೋ ಗೊತ್ತಿಲ್ಲ. ಈಗ ನಡೆದಿರುವ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು ಇದಕ್ಕೆ ಬಳಸುವ ಸಾಮಗ್ರಿಗಳು ತೀರಾ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಕೇಳಿಬರುತ್ತಿವೆ.
ಬಸವನಹಳ್ಳಿ ಗಿರಿಜನರ ಆಶ್ರಮ ಶಾಲಾ ಕಟ್ಟಡವು 1 ಕೋಟಿ 98 ಲಕ್ಷ ರೂ. ಮೊತ್ತದ ಯೋಜನೆಯ ಕಾಮಗಾರಿಯಾಗಿದೆ. ಈ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳಿಂದ ನೇರವಾಗಿ ಯಾವುದೇ ಟೆಂಡರ್ ಇಲ್ಲದೆ ಕೊಡಗು ನಿರ್ಮಿತಿ ಕೇಂದ್ರದವರು ಗುತ್ತಿಗೆ ಪಡೆದು ಕೊಂಡಿದ್ದಾರೆ. ಈ ನಿರ್ಮಿತಿ ಕೇಂದ್ರದವರು ಕೊಡಗು ಜಿಲ್ಲೆಯಲ್ಲಿ ಅನೇಕ ಕಡೆ ಕಾಮಗಾರಿಗಳನ್ನು ಗುತ್ತಿಗೆಗೆ ಪಡೆದು (ಮಾಲಂಬಿ, ಬಾಣವಾರ, ದುಬಾರೆ,) ಕಳಪೆ ಕಾರ್ಯನಿರ್ವಹಣೆ ಮಾಡಿ ಕೋಟ್ಯಂತರ ರೂ. ಗುಳುಂ ಮಾಡಿದ್ದಾರೆ. ಈ ವಿಚಾರವಾಗಿ ನಿರ್ಮಿತಿ ಕೇಂದ್ರದವರ ಕಾರ್ಯ ವೈಖರಿಯನ್ನು ಜಿಲ್ಲಾಧಿಕಾರಿಗಳಿಗೆ ಖುದ್ದಾಗಿ ಕಂಡು ವಿವರಿಸಿ ಲಿಖಿತ ಮುಖೇನ ಮನವಿ ಮಾಡಿ ಅವರಿಗೆ ಯಾವುದೇ ಕಾರಣಕ್ಕೂ ಗುತ್ತಿಗೆ ನೀಡಬಾರದೆಂದು ಜಿಪಂ ಮಾಜಿ ಅಧ್ಯಕ್ಷರು ಹಾಗೂ ಬಸವನಹಳ್ಳಿ ಲ್ಯಾಂಪ್ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ತಿಳಿಸಿರುತ್ತಾರೆ. ಈ ಶಾಲೆಯಲ್ಲಿ 1ನೆ ತರಗತಿಯಿಂದ 7ನೆ ತರಗತಿವರೆಗೆ ಕಾಡುಕುರುಬರು, ಯರವರು, ಸೋಲಿಗರು, ಜೇನುಕುರುಬರು, ಮತ್ತು ಪರಿಶಿಷ್ಟ ಜಾತಿಯ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀಮಂತರ ಮಕ್ಕಳಾದರೆ ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದ ಕಡೆ ಓದಲು ಹೋಗುತ್ತಾರೆ. ಆದರೆ ಸರಕಾರಿ ಕಟ್ಟಡಗಳೆಂದರೆ ತಾತ್ಸಾರ ಎಂಬಂತೆ ಕಾಮಗಾರಿ ನಡೆಸುವ ಗುತ್ತಿಗೆದಾರರು ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿದ್ದಾರೆ. ಇನ್ನು ಈ ಕಟ್ಟಡಕ್ಕೆ ಸಿಮೆಂಟ್ ಇಟ್ಟಿಗೆಗಳ ಬಳಕೆ ಮಾಡುತ್ತಿದ್ದು ಇವುಗಳು ಸಂಪೂರ್ಣ ಕಳಪೆಯಿಂದ ಕೂಡಿದವುಗಳಾಗಿವೆ. ಈ ಎಲ್ಲಾ ವಿವರಗಳನ್ನು ರಾಜಾರಾವ್ ಮತ್ತು ಗಿರಿಜನ ಮುಖಂಡ ಮತ್ತು ಬಸವನಹಳ್ಳಿ ಲ್ಯಾಂಪ್ ಸಹಕಾರಿ ಸಂಘದ ನಿರ್ದೇಶಕ ಮೋಹನ್ ಪತ್ರಕರ್ತರಿಗೆ ಸಾಕ್ಷೀಕರಿಸಿದ್ದು, ಸದ್ಯ ಕಾಮಗಾರಿಯನ್ನು ಮುಂದುವರಿಸದಂತೆ ತಡೆದಿದ್ದಾರೆ. ಕಟ್ಟಡದ ಪಿಲ್ಲರ್‌ಗಳು ಆಗಲೇ ಬಿರುಕು ಬಿಟ್ಟಿವೆ, ಬುನಾದಿಯೂ ಕೂಡ ಬಿರುಕು ಬಂದಿದೆ. ರಾಜಾರಾವ್ ಹೇಳುವಂತೆ, ಬುನಾದಿಯಿಂದ ಹಿಡಿದು ಈ ಕಟ್ಟಡದ ಸಂಪೂರ್ಣ ಅವಶೇಷಗಳನ್ನು ತೆಗೆದು ನೂತನವಾಗಿ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಕಟ್ಟಿದರೆ ಮಾತ್ರ ಇಲ್ಲಿ ಓದುವ ಮಕ್ಕಳು ನೆಮ್ಮದಿಯಾಗಿ ಜೀವ ಭಯವಿಲ್ಲದೆ ವ್ಯಾಸಂಗ ಮಾಡಲು ಸಾಧ್ಯ. ಈ ದೃಷ್ಟಿಯಿಂದ ಈ ಕಾಮಗಾರಿಯ ಗುತ್ತಿಗೆದಾರರನ್ನು, ಉಸ್ತುವಾರಿ ನೋಡಿಕೊಳ್ಳುತ್ತಿರುವ ಇಂಜಿನಿಯರ್‌ನ್ನು ಕಪ್ಪುಪಟ್ಟಿಯಲ್ಲಿ ಇರಿಸಿ ಉತ್ತಮ ಗುತ್ತಿಗೆದಾರರನ್ನು ಟೆಂಡರ್ ಮೂಲಕ ಆಯ್ಕೆ ಮಾಡಿಕೊಳ್ಳಬೇಕೆಂದು ಬಸವನಹಳ್ಳಿ ಲ್ಯಾಂಪ್ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್‌ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.





