ಬಿರುಸುಗೊಂಡ ಮಳೆ: ಅಪಾರ ಹಾನಿ
.jpg)
ಭಟ್ಕಳ, ಜೂ.18: ಶುಕ್ರವಾರ ರಾತ್ರಿಯಿಂದ ಶನಿವಾರ ಮಧ್ಯಾಹ್ನದವರೆಗೆ ಧಾರಾಕಾರವಾಗಿ ಸುರಿದ ಮಳೆಯು ಭಟ್ಕಳ ನಗರ ಹಾಗೂ ಗ್ರಾಮೀಣ ಭಾಗದ ಜನರನ್ನು ತತ್ತರಿಸುವಂತೆ ಮಾಡಿದೆ. ನಿರಂತರ ಮಳೆಗೆ ಹಲವು ಕಡೆಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬೃಹದಾಕಾರದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯ ಕುಸಿದಿದ್ದು ಅಪಾರ ಹಾನಿ ಸಂಭವಿಸಿದ ಕುರಿತು ವರದಿಯಾಗಿದೆ. ಶನಿವಾರ ಬೆಳಗ್ಗೆ ಗುಡುಗು ಸಿಡಿಲಿನಿಂದ ಕೂಡಿದ ಗಾಳಿಮಳೆಯಿಂದಾಗಿ ಹಲವು ಮನೆಗಳ ಹೆಂಚು ಹಾರಿಹೋಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂಡಳಿ ಗ್ರಾಮದಲ್ಲಿ ಮೂರು, ಬೆಳ್ನಿಯಲ್ಲಿ ಎರಡು ಹಾಗೂ ಭಟ್ಕಳದ ಸಿದ್ದೀಕ್ ಸ್ಟ್ರೀಟ್‌ನಲ್ಲಿ ಒಂದು ಮನೆಯ ಮೇಲೆ ಮರ ಉರುಳಿಬಿದ್ದಿದೆ. ನಗರದ ಸೋನಾರ್ ಕೇರಿಯಲ್ಲಿ ಎರಡು ಮರಗಳು ಒಂದೇ ಮನೆ ಮೇಲೆ ಬಿದ್ದು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಬಹಳಷ್ಟು ನಷ್ಟವನ್ನುಂಟು ಮಾಡಿದೆ. ನಿರಂತರ ಮಳೆಯಿಂದಾಗಿ ಜಾಲಿ ಪಂಚಾಯತ್ ವ್ಯಾಪ್ತಿಯ ಕಾರಗದ್ದೆ ಪ್ರದೇಶದಲ್ಲಿನ ರಸ್ತೆಯೊಂದು ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ಕುತ್ತು ತಂದಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ನಗರದ ಸುಲ್ತಾನ್ ಸ್ಟ್ರೀಟ್, ಮಾರಿಕಟ್ಟಾ, ರಂಗೀಕಟ್ಟಾ, ಮತ್ತು ಮುಖ್ಯ ರಸ್ತೆ ಮಳೆನೀರಿನಿಂದ ತುಂಬಿಕೊಂಡಿದ್ದು ರಸ್ತೆ ಪಕ್ಕದಲ್ಲಿನ ಅಂಗಡಿಗಳಿಗೆ ನುಗ್ಗಿದೆ. ಶಾಸಕರು ಭೇಟಿ:
ಮರ ಉರುಳಿ ಹಾನಿಗೊಳಗಾದ ಮನೆ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ಜಲಾವೃತ ಪ್ರದೇಶಗಳಿಗೆ ಶಾಸಕ ಮಾಂಕಾಳ್ ವೈದ್ಯ ಜಿಪಂ ಅಧ್ಯಕ್ಷ ಜಯಶ್ರೀ ಮೊಗೇರ್ ಭೇಟಿ ನೀಡಿ ಪರಿಶೀಲಿಸಿದ್ದು ಅಧಿಕಾರಿಗಳೊಂದಿಗೆ ಪರಿಹಾರ ಕಾರ್ಯಕೈಗೊಳ್ಳುವಂತೆ ಸೂಚಿಸಿದ್ದಾರೆ.





