ಕಡೂರು: ಬಸ್ ನಿಲುಗಡೆಗೆ ಒತ್ತಾಯಿಸಿ ನಾಳೆ ಪ್ರತಿಭಟನೆ
ಕಡೂರು, ಜೂ.18: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ನಿಲುಗಡೆ ಮಾಡದಿರುವ ಸಂಸ್ಥೆಯ ವಿರುದ್ಧ ಜೂ.20ರ ಸೋಮವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಸ್ಥ ಶಿವಕುಮಾರ್ ಮಾಳಿಗೆ ತಿಳಿಸಿದ್ದಾರೆ.
ತರೀಕೆರೆ ತಾಲೂಕಿನ ಕುಡ್ಲೂರು ಗೇಟ್‌ನಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಸಂಸ್ಥೆ 2014ರ ಜೂ.2ರಿಂದ ಜಾರಿಗೆ ಬರುವಂತೆ ಕೋರಿಕೆ ನಿಲುಗಡೆ ಕಲ್ಪಿಸಿತ್ತು. ಆದರೆ ಚಾಲಕರು ಮತ್ತು ನಿರ್ವಾಹಕರು ಬಸ್‌ಗಳನ್ನು ನಿಲ್ಲಿಸದೇ, ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕುಡ್ಲೂರು ಗ್ರಾಮದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 30ಕ್ಕೂ ಹೆಚ್ಚು ಉದ್ಯೋಗಸ್ಥರಿಗೆ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪಾಸ್‌ಗಳನ್ನು ವಿತರಿಸಿದ್ದಾರೆ. ಆದರೂ ನಿಲುಗಡೆ ನೀಡುತ್ತಿಲ್ಲ. ಇದರಿಂದ ಪ್ರಯಾಣಿಕರು ಹೆಚ್ಚಿನ ಹಣವನ್ನು ನೀಡಿ ಆಟೊ ಅಥವಾ ಖಾಸಗಿ ವಾಹನಗಳ ಮೂಲಕ ಪ್ರಯಾಣಿಸುವಂತಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಅನೇಕ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅನಿವಾರ್ಯವಾಗಿ ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.







