ಸ್ಥಳೀಯರಿಂದ ಕೋಳಿ ಪಡೆಯಲು ನಿರಾಕರಣೆ
ಜಿಪಂನಿಂದ ಹಿತ್ತಲಕೋಳಿ ನೀಡುವ ಕಾರ್ಯಕ್ರಮ
.jpg)
ಸಾಗರ, ಜೂ.18: ಇಲ್ಲಿನ ಪಶುವೈದ್ಯಕೀಯ ಇಲಾಖೆಯಿಂದ ಜಿಪಂ ಯೋಜನೆಯಡಿ ನೀಡಲಾಗುವ ಹಿತ್ತಲಕೋಳಿಯನ್ನು ಫಲಾನುಭವಿಗಳು ನಿರಾಕರಿಸಿದ ಘಟನೆ ಶನಿವಾರ ನಡೆದಿದೆ. ಯೋಜನೆಯಡಿ ನೀಡಲು ತಂದಿರುವ ಕೋಳಿಗಳು ನಿಯಮಾವಳಿ ಪ್ರಕಾರ ನಿಗದಿತ ತೂಕ ಹೊಂದಿಲ್ಲ ಎಂದು ಫಲಾನುಭವಿಗಳು ದೂರಿ, ಕೋಳಿ ಪಡೆಯಲು ನಿರಾಕರಿಸಿದರು. 16ನೆ ಸಾಲಿನಲ್ಲಿ ಜಿಪಂನಿಂದ ಹಿತ್ತಲಕೋಳಿಯನ್ನು ನೀಡಲು ತಾಲೂಕಿನಲ್ಲಿ 149 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಪ್ರತಿಯೊಬ್ಬ ಫಲಾನುಭವಿಯಿಂದ 280 ರೂ. ಪಡೆದು, 5 ಕೋಳಿಯನ್ನು ತಲಾ ಒಬ್ಬ ಫಲಾನುಭ ವಿಗಳಿಗೆ ನೀಡಲಾಗುತ್ತದೆ. ಒಂದು ಕೋಳಿಗೆ 100 ರೂ. ನಿಗದಿಪಡಿಸಲಾಗಿದ್ದು, 50 ರೂ. ಸಬ್ಸಿಡಿ ರೂಪದಲ್ಲಿ ಜಿಪಂನಿಂದ ಸಂಬಂಧಪಟ್ಟ ಕೋಳಿ ಫಾರಂಗೆ ನೀಡಲಾಗುತ್ತದೆ. ಫಲಾನುಭವಿಗಳಿಗೆ ನೀಡುವ ಕೋಳಿಮರಿ 6 ತಿಂಗಳು ಅವಧಿ ಪೂರೈಸಿದ್ದು, 400 ರಿಂದ 500 ಗ್ರಾಂ ತೂಕ ಇರಬೇಕು ಎಂಬ ನಿಯಮವಿದೆ. ಆದರೆ ಶನಿವಾರ ವಿತರಣೆ ಮಾಡಲು ತಂದಿದ್ದ ಕೋಳಿ 100 ರಿಂದ 200 ಗ್ರಾಂ ಒಳಗೆ ತೂಕ ಹೊಂದಿದ್ದರಿಂದ ಫಲಾನುಭವಿಗಳು ಕೋಳಿಮರಿಯನ್ನು ಪಡೆಯಲು ನಿರಾಕರಿಸಿದರು. ಫಲಾನುಭವಿಗಳಿಗೆ ಕೋಳಿ ವಿತರಣೆ ಮಾಡಲು ಬಂದಿದ್ದ ಜಿಪಂ ಸದಸ್ಯರಾದ ಆರ್.ಸಿ.ಮಂಜುನಾಥ್, ಅನಿತಾ ಕುಮಾರಿ ಹಾಗೂ ರಾಜಶೇಖರ ಗಾಳಿಪುರ ಅವರ ಬಳಿ ಜನರು ತಮ್ಮ ಅಹವಾಲು ಸಲ್ಲಿಸಿ, ಮುಂದಿನ ಒಂದು ತಿಂಗಳಿನೊಳಗೆ ನಿಯಮಾವಳಿ ಪ್ರಕಾರ ಕೋಳಿಮರಿ ವಿತರಣೆ ಮಾಡುವಂತೆ ಒತ್ತಾಯಿಸಿದರು. ಇದರಿಂದ ಕೋಳಿ ವಿತರಣೆಗೆ ಬಂದ ಜಿಪಂ ಸದಸ್ಯರು ವಾಪಸ್ ಹೋಗುವಂತೆ ಆಯಿತು.





