ಮಲೇರಿಯಾ, ಡೆಂಗ್ ಜ್ವರ ಮನುಷ್ಯ ಜೀವಕ್ಕೆ ಮಾರಕ: ಶಾಸಕ ನಿಂಗಯ್ಯ
ಮಲೇರಿಯಾ ಮತ್ತು ಡೆಂಗ್ ಜ್ವರ ನಿಯಂತ್ರಣ ಮಾಹಿತಿ ಜಾಥಾ

ಮೂಡಿಗೆರೆ, ಜೂ.18: ಮಲೇರಿಯಾ ಹಾಗೂ ಡೆಂಗ್ ಜ್ವರ ಮನುಷ್ಯ ಜೀವಕ್ಕೆ ಮಾರಕವಾದ ರೋಗವಾಗಿವೆ. ಈ ಜ್ವರ ಮನುಷ್ಯ ಶರೀರವನ್ನು ಪ್ರವೇಶಿಸದಂತೆ ಕಾಳಜಿ ವಹಿಸಿದಾಗ ಮಾತ್ರ ಇಂತಹ ರೋಗಗಳಿಂದ ದೂರ ಇರಬಹುದು ಎಂದು ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.
ಇಲ್ಲಿನ ಅಡ್ಯಂತಾಯ ರಂಗ ಮಂದಿರದ ಆವರಣದಲ್ಲಿ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ-2016 ಅಂಗವಾಗಿ ಮಲೇರಿಯಾ ಮತ್ತು ಡೆಂಗ್ ಜ್ವರ ನಿಯಂತ್ರಣ ಮಾಹಿತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೋಗ-ರುಜಿನಗಳು ಸ್ವಚ್ಛತೆಯ ಕೊರತೆಯಿಂದ ಕಂಡು ಬರುತ್ತದೆ. ಗ್ರಾಮೀಣ ಭಾಗಗಳ ಸಹಿತ ಪಟ್ಟಣ ವಾಸಿಗಳು ಸ್ವಚ್ಛತೆ ಕಡೆಗೆ ಗಮನ ಕೊಡಬೇಕು ಹಾಗೂ ಮಾರಕ ರೋಗಗಳಿಂದ ಮುಕ್ತಿ ಹೊಂದಬೇಕು ಎಂದು ಕರೆ ನೀಡಿದರು.
ಜಿಪಂ ಹಾಗೂ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮವು ಜೂ.16ರಂದು ಸಚ್ಛತಾ ಸಪ್ತಾಹವನ್ನು ಕೊಳಚೆ ಪ್ರದೇಶಗಳಲ್ಲಿ ಪ್ರಾರಂಭಿಸಿ ಡೆಂಗ್, ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಗಿತ್ತು. ಜೂ.17ರಂದು ನವಗ್ರಾಮಗಳಲ್ಲಿ, ಜೂ.18ರಂದು ಶಿಕ್ಷಣ ಸಂಸ್ಥೆಗಳೊಂದಿಗೆ ಜಾಥಾ, ಜೂ.19ರಂದು ಸರಕಾರಿ ಕಚೇರಿ, ಜೂ.20ರಂದು ಸಾರ್ವಜನಿಕ ಪ್ರದೇಶಗಳಲ್ಲಿ ಜೂ.21ರಂದು ಆಸ್ಪತ್ರೆಗಳಲ್ಲಿ,ಜೂ.22ರಂದು ಕಾರ್ಖಾನೆ ಪ್ರದೇಶಗಳಲ್ಲಿ ಡೆಂಗ್, ಮಲೇರಿಯಾ ಅರಿವು ಸಪ್ತಾಹ ಹಮ್ಮಿಕೊಳ್ಳುವಂತೆ ಸರಕಾರದ ನಿರ್ದೆೇಶನವಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಸದಸ್ಯ ರಂಜನ್ ಅಜಿತ್ ಕುಮಾರ್ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಸವಿತಾ ರಮೇಶ್, ಜಿಪಂ ಸದಸ್ಯೆ ಸುಧಾ ಯೋಗೇಶ್, ಬಣಕಲ್ ಜಿಪಂ ಸದಸ್ಯ ಶಾಮಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ಯೋಗೇಶ್, ಮುಖಂಡರಾದ ಎಚ್.ಆರ್.ಪುಟ್ಟಸ್ವಾಮಿ, ಆರೋಗ್ಯ ಇಲಾಖೆ ಸಹಾಯಕ ಜೆ.ಡಿ.ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ರೈತರಿಗೆ ಕರೆ ಚಿಕ್ಕಮಗಳೂರು, ಜೂ.18: ರೈತರು ಸರಕಾರದಿಂದ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳುವುದರೊಂದಿಗೆ ಆಧುನಿಕ ಕೃಷಿ ಪದ್ಧ್ದತಿಯನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕೆಂದು ಜಿಪಂ ಸದಸ್ಯ ಬಿ.ಜಿ ಸೋಮಶೇಖರ್ ಕರೆ ನೀಡಿದರು.
ಅವರು ತಾಲೂಕಿನ ಚಿಕ್ಕಕುರುಬರಹಳ್ಳಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕೃಷಿ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರದ ವಿವಿಧ ಇಲಾಖೆಗಳಲ್ಲಿ ಸಿಗುವ ತಾಂತ್ರಿಕ ಮಾಹಿತಿಗಳನ್ನು ಪಡೆದು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಕೃಷಿ ಉತ್ಪನ್ನಗಳ ಇಳುವರಿಯನ್ನು ಹೆಚ್ಚಿಸಿಕೊಂಡು ರೈತರು ಆರ್ಥಿಕವಾಗಿ ಸದೃಢವಾಗಬೇಕೆಂದರು. ಕೃಷಿ ಸಮಾಜದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ರೈತರು ತಮ್ಮ ಹೊಲದಲ್ಲಿ ಬೆಳೆಗಳನ್ನು ಬೆಳೆದರೆ ಸಾಲದು ಅವುಗಳನ್ನು ವಿವಿಧ ರೀತಿಯಲ್ಲಿ ಮಾರಾಟ ಮಾಡುವ ಚಾಣಕ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದ ಅವರು, ಸರಕಾರವು ಸಹ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಅವಶ್ಯವಿದೆ ಎಂದು ಹೇಳಿದರು.
ಮೂಡಿಗೆರೆ ಕೆವಿಕೆಯ ವಿಜ್ಞಾನಿ ಡಾ.ಗಿರೀಶ್ ಮಾತನಾಡಿ, ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬೆಳೆಗಳಿಗೆ ಪೋಷಕಾಂಶ ನೀಡಿದಲ್ಲಿ ರೈತರು ಅಧಿಕ ಇಳುವರಿ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದಭರ್ದಲ್ಲಿ ಚಿಕ್ಕಮಗಳೂರಿನ ಸಾಂಕೇತ್ ಯುವಕ ಸಂಘ ವತಿಯಿಂದ ಕೃಷಿ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಪರಿಚಯಿಸುವ ಕಿರು ನಾಟಕವನ್ನು ಪ್ರದರ್ಶಿಸಿದರು. ಪಶು ವೈದ್ಯಕೀಯ, ತೋಟಗಾರಿಕೆ, ರೇಷ್ಮೆ ಕೃಷಿ, ಸಾವಯವ ಕೃಷಿ, ಜೈವಿಕ ಇಂಧನ ಹಾಗೂ ಆರೋಗ್ಯ ಇಲಾಖೆ ವತಿಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ತಾಪಂ ಸದಸ್ಯ ಜಯಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಪಂ ಸದಸ್ಯರುಗಳಾದ ದಾಕ್ಷಾಯಿಣಿ ಪೂರ್ಣೇಶ್, ರಮೇಶ್, ವೈ.ಜೆ ರಮೇಶ್, ಕೃಷಿ ಇಲಾಖೆಯ ಉಪನಿರ್ದೇಶಕ ಕೆ.ಆರ್.ಲೋಕೇಶ್ ಮಾತನಾಡಿದರು. ರಾಜು ಸ್ವಾಗತಿಸಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಿ. ಸುಜಾತಾ, ಪ್ಲೇವಿಯನ್ ಮತ್ತಿತರರು ಉಪಸ್ಥಿತರಿದ್ದರು.







