14 ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಸೂಚನೆ

ಬೆಂಗಳೂರು, ಜೂ.18: ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಹದಿನಾಲ್ಕು ಮಂದಿ ಹಾಲಿ ಸಚಿವರಿಗೆ ಕೂಡಲೇ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿರುವ ಬೆನ್ನಲ್ಲೇ ಸ್ಥಾನ ಕೈತಪ್ಪಿದ ಸಚಿವರು ಮತ್ತವರ ಬೆಂಬಲಿಗರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್, ವಸತಿ ಸಚಿವ ಅಂಬರೀಷ್, ಜವಳಿ ಸಚಿವ ಬಾಬುರಾವ್ ಚಿಂಚನಸೂರ್, ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕಾ, ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ, ಕ್ರೀಡಾ ಸಚಿವ ಅಭಯ ಚಂದ್ರ ಜೈನ್, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಆಹಾರ ಸಚಿವ ದಿನೇಶ್ ಗುಂಡೂರಾವ್, ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅಬಕಾರಿ ಸಚಿವ ಮನೋಹರ್ ತಹಶೀಲ್ದಾರ್ ಸೇರಿ ಹದಿನಾಲ್ಕು ಮಂದಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಶ್ರೀನಿವಾಸ ಪ್ರಸಾದ್, ಖಮರುಲ್ ಇಸ್ಲಾಂ, ಅಂಬರೀಷ್, ಶಾಮನೂರು ಶಿವಶಂಕರಪ್ಪ ಸೇರಿದಂತೆ ಅತೃಪ್ತ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸಂಪುಟ ಪುನಾರಚನೆ ಪರಮಾಧಿಕಾರ ಹೊಂದಿರುವ ಸಿಎಂ ಸಿದ್ದರಾಮಯ್ಯ, ಸಂಪುಟದಲ್ಲಿ ಯಾರು ಎಷ್ಟು ಕೆಲಸ ಮಾಡಿದ್ದಾರೆಂಬ ವೌಲ್ಯಮಾಪನ ಮಾಡಿ ತೀರ್ಮಾನ ಕೈಗೊಳ್ಳಬೇಕಿತ್ತು’ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
‘ನನ್ನನ್ನು ಸಂಪುಟದಿಂದ ಕೈಬಿಡಲು ನನ್ನ ಸಮುದಾಯದ ಕೆಲ ಮುಖಂಡರೆ ವ್ಯವಸ್ಥಿತ ಸಂಚು ರೂಪಿಸಿದರು. ಹೀಗಾಗಿ ನನ್ನನ್ನು ಸಚಿವ ಸಂಪುಟದಿಂದ ಕೈಬಿಡಲಾಗುತ್ತಿದೆ’ ಎಂದು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಹೊಸದಿಲ್ಲಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಶೋಷಿತರ ದಮನ: ‘ಕಾಂಗ್ರೆಸ್ ಪಕ್ಷದಲ್ಲಿ ಶೋಷಿತ ಸಮುದಾಯದವರಿಗೆ ಸೂಕ್ತ ಸ್ಥಾನ ನೀಡುತ್ತಿಲ್ಲ. ತಾನು ನಾಲ್ಕು ಬಾರಿ ಆಯ್ಕೆಯಾಗಿದ್ದು, ಉತ್ತಮ ಶೈಕ್ಷಣಿಕ ಅರ್ಹತೆಯಿದ್ದರೂ, ತನಗೆ ಸಚಿವ ಸ್ಥಾನ ನೀಡಿಲ್ಲ’ ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ಆಕ್ರೋಶವನ್ನು ಹೊರಹಾಕಿದರು.
ಈ ಮಧ್ಯೆಯೇ ಮೈಸೂರು, ಮಂಡ್ಯ, ಬೆಳಗಾವಿ ಸೇರಿದಂತೆ ವಿವಿಧೆಡೆಗಳಲ್ಲಿ ಸ್ಥಾನ ಕೈತಪ್ಪಿದ ಸಚಿವರು ಹಾಗೂ ಶಾಸಕರ ಬೆಂಬಲಿಗರು ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಪ್ರತಿಭಟನೆ ನಡೆಸಿ ಕಿಡಿಕಾರಿದ್ದಾರೆ.







