"ಶಿಕ್ಷಣ ಕ್ಷೇತ್ರ ಮಾತ್ರವಲ್ಲ; ಇಡೀ ದೇಶವನ್ನೇ ಕೇಸರೀಕರಣ ಮಾಡುತ್ತೇವೆ" ಕೇಂದ್ರ ಸಚಿವ ಕಥೇರಿಯಾ

ಹೊಸದಿಲ್ಲಿ: ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಹಾಗೂ ಸ್ಮತಿ ಇರಾನಿಯವರ ಸಹಾಯಕ ಸಚಿವ, ರಾಮ್‌ಸಿಂಗ್ ಕಥೇರಿಯಾ, ಇಸ್ಲಾಮ್ ವಿರುದ್ಧದ ಹೇಳಿಕೆಯಿಂದ ಸದಾ ವಿವಾದ ಸೃಷ್ಟಿಸುವಲ್ಲಿ ನಿಸ್ಸೀಮರು. ಬಿಜೆಪಿ ಸದಾ ನಿರಾಕರಿಸುತ್ತಲೇ ಬಂದಿರುವ ಶಿಕ್ಷಣದ ಕೇಸರೀಕರಣ ಆರೋಪವನ್ನು ಇದೀಗ ಸಚಿವರು ಒಪ್ಪಿಕೊಂಡಿರುವುದು ಮಾತ್ರವಲ್ಲ; ಬಹಿರಂಗವಾಗಿ, ಶಿಕ್ಷಣ ಕ್ಷೇತ್ರವನ್ನು ಮಾತ್ರವಲ್ಲ; ಇಡೀ ದೇಶವನ್ನೇ ಕೇಸರೀಕರಣ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಮೋದಿ ಸರ್ಕಾರ ಶಿಕ್ಷಣದ ಕೇಸರೀಕರಣ ಮಾಡುತ್ತಿರುವುದು ನಿಜ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, "ಕೇವಲ ಶಿಕ್ಷಣ ಕ್ಷೇತ್ರವನ್ನು ಮಾತ್ರವಲ್ಲ. ಇಡೀ ದೇಶದ ಕೇಸರೀಕರಣವೇ ನಡೆಯಲಿದೆ. ದೇಶಕ್ಕೆ ಯಾವುದು ಒಳ್ಳೆಯದೋ ಅದು ನಡೆಯುತ್ತದೆ. ಅದು ಕೇಸರೀಕರಣ ಇರಬಹುದು ಅಥವಾ ಸಂಘದ ಸಿದ್ಧಾಂತವನ್ನು ಪ್ರಚುರಪಡಿಸುವುದು ಇರಬಹುದು. ನಾವು ಧೀರ್ಘ ಕಾಲದಿಂದಲೂ ಇದನ್ನು ನೋಡಿದ್ದೇವೆ. ಯಾರನ್ನೂ ದೂರಿಲ್ಲ. ಆದರೆ ಈಗ ವಾತಾವರಣ ಬದಲಾಗಿದೆ" ಎಂದು ವಿವರಿಸಿದರು.
ಇತಿಹಾಸದ ಮುಸ್ಲಿಂ ಆಡಳಿತಗಾರರ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ವೇಳೆ ಸಚಿವರು, ಮಹಾರಾಣಾ ಪ್ರತಾಪ್ ಮತ್ತು ಸುಭಾಸ್‌ಚಂದ್ರ ಬೋಸ್ ಅವರ ಹೆಸರನ್ನು ತಪ್ಪಾಗಿ ಉಲ್ಲೇಖಿಸಿದರು. "ಇತಿಹಾಸದಲ್ಲಿ ರಾಣಾ ಪ್ರತಾಪ್ ಹಾಗೂ ಮಹಾರಾಣಾ ಸುಭಾಷ್ ಜಿ ಬಗ್ಗೆ ಬೋಧಿಸುವ ಬದಲು ಘೇಂಗೀಸ್ ಖಾನ್ ಬಗ್ಗೆ ಬೋಧಿಸಬೇಕೇ" ಎಂದು ಖಾರವಾಗಿ ಪ್ರಶ್ನಿಸಿದರು.







