ಕಾಸರಗೋಡು:ಬೆಳಕಿಗೆ ಬರುತ್ತಿವೆ ಮತ್ತಷ್ಟು ನಕಲಿ ಚಿನ್ನಾಭರಣ ವಂಚನೆ ಪ್ರಕರಣಗಳು

ಕಾಸರಗೋಡು, ಜೂ.19: ನಕಲಿ ಚಿನ್ನಾಭರಣವನ್ನು ಅಡವಿಟ್ಟು ಬ್ಯಾಂಕ್ನಿಂದ ಸಾಲ ಪಡೆದು ವಂಚನೆ ನಡೆಸುತ್ತಿರುವವರ ಸಂಖ್ಯೆ ಹಚ್ಚುತ್ತಿದ್ದು, ಈವರೆಗೆ ಎಂಟು ಕೋಟಿ ರೂ.ಗಳ ವಂಚನೆ ನಡೆದಿದೆ.
ಜಿಲ್ಲೆಯ ಎಲ್ಲಾ ಸಹಕಾರಿ ಬ್ಯಾಂಕ್ಗಳಲ್ಲಿ ತಪಾಸಣೆ ನಡೆಯುತ್ತಿದ್ದು, ಈಗಾಗಲೇ ಮೂರು ಬ್ಯಾಂಕ್ಗಳಲ್ಲಿ ವಂಚನೆ ಪ್ರಕರಣಗಳು ಪತ್ತೆಯಾಗಿವೆ. ಮುಟ್ಟತ್ತೋಡಿ, ಪಿಲಿಕ್ಕೋಡು ಬಳಿಕ ಇದೀಗ ಉದುಮ ಪನಯಾಲ್ ಸೇವಾ ಸಹಕಾರಿ ಬ್ಯಾಂಕ್ನಲ್ಲೂ ವಂಚನೆ ಬಯಲಿಗೆ ಬಂದಿದೆ.
ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ನಾಲ್ಕು ಕೋಟಿ ರೂ. ಗಳ ವಂಚನೆ ನಡೆದಿತ್ತು. ಮೂರು ಬ್ಯಾಂಕ್ಗಳ ವಂಚನೆಗೆ ಸಂಬಂಧಪಟ್ಟಂತೆ ಈಗಾಗಲೇ ನಾಲ್ವರು ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಇಬ್ಬರು ಬ್ಯಾಂಕ್ ಮ್ಯಾನೇಜರ್‌ಗಳಾಗಿದ್ದಾರೆ. ನಕಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದವರಲ್ಲಿ ಹೊರ ರಾಜ್ಯದ ಕಾರ್ಮಿಕರು ಅಧಿಕವಾಗಿದ್ದಾರೆ.
ಮೂರು ಬ್ಯಾಂಕ್ಗಳಲ್ಲಿ ವಂಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಉಳಿದ ಸಹಕಾರಿ ಬ್ಯಾಂಕ್ಗಳ ಬಗ್ಗೆ ಸಂಶಯ ಉಂಟಾಗಿದೆ. ಇದಕ್ಕಾಗಿ ನೇಮಿಸಿದ ವಿಶೇಷ ತಂಡವು ತಪಾಸಣೆ ನಡೆಸುತ್ತಿದೆ. ಸುಮಾರು 20 ಕೋಟಿ ರೂ. ಗಳ ವಂಚನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸುತ್ತಿದೆ. ಎಂಟು ಕೋಟಿ ರೂ. ಗಳ ವಂಚನೆ ಈಗಾಗಲೇ ಪತ್ತೆಯಾಗಿದೆ.ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್ನ ಎರಡು ಶಾಖೆಗಳಲ್ಲಿ ನಾಲ್ಕು ಕೋಟಿ ರೂ.ಗೂ ಅಧಿಕ ಚಿನ್ನಾಭರಣ ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ತಪಾಸಣೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿ 69 ಸಹಕಾರಿ ಬ್ಯಾಂಕ್‌ಗಳು ಮತ್ತು ಅದರ ಶಾಖೆಗಳಲ್ಲಿ ತಪಾಸಣೆ ನಡೆಯುತ್ತಿದೆ.
ಅಂಕಿ ಅಂಶಗಳಂತೆ ಜಿಲ್ಲೆಯ ಸಹಕಾರಿ ಬ್ಯಾಂಕ್ಗಳಲ್ಲಿ ಒಂದು ಸಾವಿರ ಕೋಟಿ ರೂ.ಗಳ ಚಿನ್ನಾಭರಣ ಗ್ರಾಹಕರು ಅಡವಿಟ್ಟಿದ್ದಾರೆ. ಜಿಲ್ಲಾ ಬ್ಯಾಂಕೊಂದರಲ್ಲಿ ಮಾತ್ರ 150 ಕೋಟಿ ರೂ. ಮೊತ್ತದ ಸಾಲ ನೀಡಲಾಗಿದೆ. ಈ ಪೈಕಿ ಎಷ್ಟು ಚಿನ್ನಾಭರಣಗಳು ಅಸಲಿ ಹಾಗೂ ನಕಲಿ ಎಂಬುದು ಸ್ಪಷ್ಟಗೊಳ್ಳಬೇಕಿದೆ.
ಬ್ಯಾಂಕ್ ಸಿಬ್ಬಂದಿಯೇ ಶಾಮೀಲು
ಈಗಾಗಲೇ ಬೆಳಕಿಗೆ ಬಂದ ಮೂರು ಪ್ರಕರಣಗಳಲ್ಲಿ ಬ್ಯಾಂಕ್ ಸಿಬ್ಬಂದಿಯೇ ಶಾಮೀಲಾಗಿದ್ದಾರೆ ಎಂಬುದು ಸಾಬೀತಾಗಿದೆ. ಬ್ಯಾಂಕ್ ಮ್ಯಾನೇಜರ್‌ಗಳಿಂದ ಹಿಡಿದು ಅಪ್ರೈಸರ್ಗಳ ತನಕ ಈ ವಂಚನೆಯಲ್ಲಿ ಶಾಮಿಲಾಗಿರುವುದು ಅಚ್ಚರಿ ಉಂಟು ಮಾಡಿದೆ.
ಗ್ರಾಹಕರು ಬ್ಯಾಂಕ್ಗಳಲ್ಲಿ ಅಡವಿಡಲು ತರುವ ಚಿನ್ನಾಭರಣದ ಅಸಲಿ ಪತ್ತೆಗೆ ಅಪ್ರೈಸರ್ಗಳನ್ನು ನೇಮಿಸಲಾಗಿದೆ. ಅಪ್ರೈಸರ್ಗಳು ಚಿನ್ನಾಭರಣದ ತಪಾಸಣೆ ನಡೆಸಿ ಮ್ಯಾನೇಜರ್‌ಗೆ ಒಪ್ಪಿಸಲಾಗುತ್ತದೆ. ಅಸಲಿ ಚಿನ್ನಾಭರಣದ ಮೇಲೆ ಮಾತ್ರ ಸಾಲ ನೀಡಲಾಗುತ್ತದೆ. ಆದರೆ ಇಲ್ಲಿ ನಕಲಿ ಚಿನ್ನಾಭರಣಗಳಿಗೂ ಸಾಲ ನೀಡಲಾಗಿದ್ದು, ಬ್ಯಾಂಕ್ ಸಿಬ್ಬಂದಿಯ ಕೈವಾಡದ ಬಗ್ಗೆ ವ್ಯಾಪಕ ಸಂಶಯ ವ್ಯಕ್ತವಾಗಿದೆ.
ತನಿಖೆ ಕ್ರೈಂ ಬ್ರಾಂಚ್ಗೆ ವಂಚನೆ ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ಒಪ್ಪಿಸುವ ನಿಟ್ಟಿನಲ್ಲಿ ತನಿಖಾ ತಂಡ ಚಿಂತನೆ ನಡೆಸಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪ್ರಕರಣಗಳು ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದರಿಂದ ತನಿಖೆಯನ್ನು ಶೀಘ್ರ ಕ್ರೈಂ ಬ್ರಾಂಚ್ಗೆ ಒಪ್ಪಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.







