ನಗರದ ಒಳ ಭಾಗಗಳ ರಸ್ತೆಗಳಿಗೆ ಹೆಚ್ಚಿನ ಆದ್ಯತೆ :ಜೆ.ಆರ್.ಲೋಬೊ

ಮಂಗಳೂರು, ಜೂ.19: ನಗರದ ಒಳಭಾಗದಲ್ಲಿ ವಾಸಿಸುತ್ತಿರುವ ಜನರು ಕೂಡಾ ನಗರದಲ್ಲಿ ವಾಸಿಸುತ್ತಿರುವ ಜನರ ಹಾಗೆಯೇ ತೆರಿಗೆಯನ್ನು ಪಾವತಿಸುತ್ತಾರೆ. ಆದ್ದರಿಂದ ಒಳರಸ್ತೆಯನ್ನು ಅಭಿವೃದ್ಧಿ ಪಡಿಸಿದರೆ ಅಲ್ಲಿಯ ಜನರಿಗೆ ನ್ಯಾಯ ದೊರಕಿಸಿ ಕೊಟ್ಟಂತಾಗುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಇಂದು 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಅಳಪೆ ವಾರ್ಡಿನ ಸಿರ್ಲಪಡ್ಲು 200 ಮೀಟರ್ ಉದ್ದದ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ರಸ್ತೆಗಳ ಅಭಿವೃದ್ಧಿಯಾದರೆ ಜನರಿಗೆ ಸೌಕರ್ಯ ಸಿಗುವ ಜೊತೆಗೆ ಊರಿನ ಅಭಿವೃದ್ಧಿಯು ಆಗುತ್ತದೆ. ಇದರಿಂದ ಜನರು ಸಂತೋಷವಾಗಿರುತ್ತಾರೆ. ಒಳಭಾಗಗಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದರೆ, ನಗರದ ಜನರು ಒಳಪ್ರದೇಶಗಳಿಗೆ ಬಂದು ನೆಲೆಯೂರುತ್ತಾರೆ. ಆಗ ನಗರದಲ್ಲಿ ಸ್ವಲ್ಪಮಟ್ಟಿಗೆ ಜನದಟ್ಟಣೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‌ಗಳಾದ ಪ್ರಕಾಶ್ ಅಳಪೆ, ಕೇಶವ ಮರೋಳಿ, ವಾರ್ಡ್ ಅಧ್ಯಕ್ಷ ಡೆನ್ನಿಸ್ ಡಿಸಿಲ್ವ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ರಮಾನಂದ ಪೂಜಾರಿ, ನವೀನ್, ವಿಕ್ನಿಸ್ ಮೊಂತೆರೊ, ನೆಲ್ಸನ್ ಮೊಂತೆರೊ, ಹೆನ್ರಿ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.





