ರಘುರಾಮ ರಾಜನ್ ನಿರ್ಗಮನ ಭಾರತವು ಕುಶಲ ಆರ್ಥಿಕ ಚಿಂತಕನನ್ನು ಕಳೆದುಕೊಳ್ಳುತ್ತಿದೆ: ಡಾ. ಅಮರ್ತ್ಯಸೇನ್

ಹೊಸದಿಲ್ಲಿ, ಜೂ.19: ಆರ್‌ಬಿಐ ಗವರ್ನರ್ ಆಗಿ ಎರಡನೆ ಅವಧಿಗೆ ಮುಂದುವರಿಯದಿರುವ ರಘುರಾಮ ರಾಜನ್‌ರ ನಿರ್ಧಾರವು ದೇಶಕ್ಕೆ ದುಃಖಕರವಾದುದೆಂದು ವ್ಯಾಖ್ಯಾನಿಸಿರುವ ನೋಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೇನ್, ಭಾರತವು ವಿಶ್ವದ ಅತ್ಯಂತ ಕುಶಲ ಆರ್ಥಿಕ ಚಿಂತಕರೊಬ್ಬರನ್ನು ಕಳೆದುಕೊಳ್ಳುತ್ತಿದೆ ಎಂದಿದ್ದಾರೆ.
‘‘ವಿಶ್ವದ ಅತ್ಯಂತ ಕುಶಲ ಆರ್ಥಿಕ ಚಿಂತಕರೊಬ್ಬರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇದು ದೇಶಕ್ಕೆ ವಿಶಾದದ ಸಂಗತಿ ಹಾಗೂ ದೇಶದ ಸರಕಾರಕ್ಕೂ ದುಃಖದ ವಿಚಾರವಾಗಿದೆ. ಆರ್‌ಬಿಐ ಸಂಪೂರ್ಣ ಸ್ವಾಯತ್ತ ಸಂಸ್ಥೆಯಲ್ಲ’’ ಎಂದು ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ಡಾ. ರಾಜನ್‌ರನ್ನು ಅನೇಕ ಸಂದರ್ಭಗಳಲ್ಲಿ ಟೀಕಿಸಿರುವ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿಯವರ ಕುರಿತು ಉಲ್ಲೇಖಿಸಿದ ಸೇನ್, ಆಡಳಿತ ಪಕ್ಷದ ಕೆಲವು ಸದಸ್ಯರು ರಾಜನ್‌ರ ಮೇಲೆ ಗೂಢಚಾರಿಕೆ ನಡೆಸುತ್ತಿದ್ದರೆಂಬುದು ಸತ್ಯ. ತಾನು ಅದನ್ನು ನೋಡಿಲ್ಲವಾದರೂ ಕೆಲವರು ತನಗೆ ತಿಳಿಸಿದ್ದಾರೆ. ಅದನ್ನು ತಾನು ಅರ್ಥಮಾಡಿಕೊಳ್ಳಬಲ್ಲೆ. ಅದು ಖಂಡಿತವಾಗಿಯೂ ದುರದೃಷ್ಟಕರವೆಂದು ಹೇಳಿದ್ದಾರೆ.
ತಾನು ನರೇಂದ್ರ ಮೋದಿ ಸರಕಾರದ ಅಭಿಮಾನಿಯಲ್ಲವೆಂದುಲ್ಲೇಖಿಸಿದ ಆರ್ಥಿಕಜ್ಞ, ಆಡಳಿತವು ತನ್ನ ನೀತಿಯಲ್ಲಿ ಏನನ್ನು ಬಯಸುತ್ತಿದೆಯೆಂಬುದನ್ನು ನಿರ್ಧರಿಸಬಹುದೆಂದು ಅಭಿಪ್ರಾಯಿಸಿದ್ದಾರೆ.
ಸೆ.4ರಂದು ಆರ್‌ಬಿಐ ಗವರ್ನರ್ ಆಗಿ ತನ್ನ ಅವಧಿ ಮುಗಿದ ಬಳಿಕ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲಿದ್ದೇನೆಂದು ಶನಿವಾರ ರಾಜನ್ ತಿಳಿಸಿದ್ದಾರೆ.





