ಗೃಹ ಸಚಿವಾಲಯದಿಂದ ತನಿಖೆಗೆ ಆದೇಶ
ಪ್ರಧಾನಿ ಕಚೇರಿ ಕದ್ದಾಲಿಕೆ
ಹೊಸದಿಲ್ಲಿ, ಜೂ.19: ಪ್ರಧಾನಿ ಕಚೇರಿಗೆ ಬೃಹತ್ ಉದ್ಯಮಿಗಳ ಕಳ್ಳಕಿವಿಯ ಕುರಿತಂತೆ ತನಿಖೆಯೊಂದಕ್ಕೆ ಕೇಂದ್ರ ಗೃಹ ಸಚಿವಾಲಯ ಆದೇಶಿದೆ. ಪ್ರಧಾನಿ ಕಚೇರಿಗೆ ದೂರೊಂದು ಬಂದಿರುವ ಹಿನ್ನೆಲೆಯಲ್ಲಿ 2001ರಿಂದ 2006ರ ನಡುವೆ ಉನ್ನತ ಸರಕಾರಿ ಅಧಿಕಾರಿಗಳು ಹಾಗೂ ಉದ್ಯಮಿಗಳ ದೂರವಾಣಿಗಳ ಕದ್ದಾಲಿಸುವಿಕೆಯ ಆರೋಪದ ಬಗ್ಗೆ ತನಿಖೆಯೊಂದಕ್ಕೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.
ಕಾರ್ಪೊರೇಟ್ ಸಂಸ್ಥೆ ಎಸ್ಸಾರ್ ಗ್ರೂಪ್, 5 ವರ್ಷಗಳಿಗೂ ಹೆಚ್ಚು ಕಾಲ ಅನೇಕ ಸಂಪುಟ ಸಚಿವರು, ಉದ್ಯಮಿಗಳಾದ ಮುಕೇಶ್ ಅಂಬಾನಿ, ಅನಿಲ್ ಅಂಬಾನಿ ಹಾಗೂ ಹಲವು ಅಧಿಕಾರಿಗಳ ದೂರವಾಣಿಗಳನ್ನು ಕದ್ದಾಲಿಸಿದೆಯೆಂದು 'ದಿ ಇಂಡಿಯನ್ ಎಕ್ಸ್ ಪ್ರೆಸ್' ಹಾಗೂ 'ಔಟ್‌ಲುಕ್' ಪತ್ರಿಕೆಗಳು ಶುಕ್ರವಾರ ಮೊದಲು ವರದಿ ಮಾಡಿದ್ದವು.
ದಾಖಲಿಸಿಕೊಳ್ಳಲಾಗಿರುವ ಸಂಭಾಷಣೆಗಳು, ಅಧಿಕಾರದ ಪಡಸಾಲೆಯಲ್ಲಿ ನಡೆಯುವ ವ್ಯಾಪಕ ವಶೀಲಿಬಾಜಿ, ವ್ಯಾಪಾರ ವಲಯದ ಭ್ರಷ್ಟಾಚಾರ, ವ್ಯವಹಾರಗಳ ದಲ್ಲಾಳಿತನ ಹಾಗೂ ಸರಕಾರ ಮತ್ತು ವ್ಯಾಪಾರದ ನಡುವಿನ ಗೆರೆಯು ತೆಳುವಾಗುತ್ತಿರುವುದನ್ನು ಬಹಿರಂಗಪಡಿಸಿವೆಯೆಂದು 'ಇಂಡಿಯನ್ ಎಕ್ಸ್‌ಪ್ರೆಸ್' ಹೇಳಿತ್ತು.
ಹತ್ತು ದಿನಗಳ ಹಿಂದೆಯೇ ಹಗರಣದ ಕುರಿತು ತನಿಖೆಗೆ ವ್ಯವಸ್ಥೆ ಮಾಡಲಾಗಿದೆ. ತನಿಖೆ ಮುಗಿದೊಡನೆಯೇ ಅದು ಪ್ರಧಾನಿ ನರೇಂದ್ರ ಮೋದಿಯವರ ಕಚೇರಿಯೊಂದಿಗೆ ವರದಿಯನ್ನು ಹಂಚಿಕೊಳ್ಳಲಿದೆಯೆಂದು ಗೃಹ ಸಚಿವಾಲಯ ಹೇಳಿದೆ.