ನಾನು ಗೋಡೆ ಹಾರುವವನಲ್ಲ: ಮಲ್ಯ
ಲಂಡನ್ ಪುಸ್ತಕ ಬಿಡುಗಡೆ ವಿವಾದ
ಲಂಡನ್, ಜೂ.19: ತಾನು ಗೋಡೆ ಹಾರುವವನಲ್ಲ ಎಂದು ಹೇಳುವ ಮೂಲಕ ಲಂಡನ್‌ನಲ್ಲಿ ಭಾರತೀಯ ರಾಯಭಾರಿಯೂ ಭಾಗವಹಿಸಿದ್ದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಹ್ವಾನವಿತ್ತೆಂಬ ಸೂಚನೆಯನ್ನು 'ಘೋಷಿತ ಅಪರಾಧಿ ವಿಜಯ್ ಮಲ್ಯ ನೀಡಿದ್ದಾರೆ.
ಗುರುವಾರ ಬ್ರಿಟನ್‌ನ ಭಾರತೀಯ ರಾಯಭಾರಿ ನವತೇಜ್ ಸರ್ನಾ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಲ್ಯ ಕಾಣಿಸಿದ್ದುದು ವಿವಾದವೊಂದಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯವು, ಕಾರ್ಯಕ್ರಮ ಸಂಘಟಕರ ಆಮಂತ್ರಿತರ ಪಟ್ಟಿಯಲ್ಲಿ ಮಲ್ಯರ ಹೆಸರಿರಲಿಲ್ಲವೆಂದು ಸ್ಪಷ್ಟೀಕರಣ ನೀಡಿತ್ತು ''ನಾನು ನನ್ನ ಜೀವಮಾನದಲ್ಲಿ ಎಂದೂ ಗೋಡೆ ಹಾರಲಿಲ್ಲ. ನಾನು ಗೋಡೆ ಹಾರುವವನಲ್ಲ. ಮುಂದೆಯೂ ಅದಾಗಲಾರೆ'' ಎಂದು ಅವರು ಆಮಂತ್ರಿತರ ಪಟ್ಟಿಯಲ್ಲಿರಲಿಲ್ಲವೆಂಬ ಪ್ರತಿಪಾದನೆಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸಭೆಯಲ್ಲಿ ಮಲ್ಯರನ್ನು ನೋಡಿದೊಡನೆಯೇ ಸರ್ನಾ, ವೇದಿಕೆ ಹಾಗೂ ಸಭಾಭವನದಿಂದ ಹೊರ ಹೋಗಿದ್ದರೆಂದು ವಿದೇಶಾಂಗ ಸಚಿವಾಲಯ ಹೇಳಿತ್ತು. ಕಾರ್ಯಕ್ರಮವನ್ನು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್(ಎಲ್‌ಎಸ್‌ಇ) ಆಯೋಜಿಸಿತ್ತು.
ತನ್ನ ಸ್ನೇಹಿತ-ಲೇಖಕನಿಗಾಗಿ ತಾನಲ್ಲಿ ಹೋಗಿದ್ದೆ. ಮಗಳೊಂದಿಗೆ ಸುಮ್ಮನೆ ಕುಳಿತು ಕೇಳುತ್ತಿದ್ದೆ. ಆ ಬಳಿಕ ಮುಖಪುಟ ಸುದ್ದಿಗಳು ಹಾಗೂ ಆಧಾರರಹಿತ ಊಹಾಪೋಹಗಳು ಆರಂಭವಾದವೆಂದು ಕಾರ್ಯಕ್ರಮ ಆರಂಭವಾದ ಕೆಲವೇ ಹೊತ್ತಿನಲ್ಲಿ ಒಳಗೆ ಪ್ರವೇಶಿಸಿದ್ದ ಮಲ್ಯ ಹೇಳಿದ್ದಾರೆ.
ಸಾಕ್ಷವಿಲ್ಲ, ಆರೋಪ ಪಟ್ಟಿಯಿಲ್ಲ. ಇದೆನ್ನೆಲ್ಲ ಪ್ರತಿಪಾದಿಸುವ ಮೊದಲು ತನಗೆ ಕಾನೂನು ಪರಿಹಾರ ಹುಡುಕಲು ಅವಕಾಶ ನೀಡಬೇಡವೇ? ಇದು ಅತ್ಯಂತ ಅನ್ಯಾಯ ಎಂದವರು ಕಿಡಿಕಾರಿದ್ದಾರೆ.





