‘ರೈತರು ಕೃಷಿ ಅಭಿಯಾನದ ಉಪಯೋಗ ಪಡೆದುಕೊಳ್ಳಿ’
ಕೃಷಿ ಅಭಿಯಾನ ಉದ್ಘಾಟನೆ
ಹೊನ್ನಾವರ, ಜೂ.19: ತಾಲೂಕಿನ ಚಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಕೆಯ ಬಳಿ ಕೃಷಿ ಮತ್ತು ಕೃಷಿ ಸಂಬಂಧಿ ಇಲಾಖೆಗಳು ಹೊನ್ನಾವರ ಇವರ ಆಶ್ರಯದಲ್ಲಿ ಕೃಷಿ ಅಭಿಯಾನ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಹೊನ್ನಾವರದ ಸಹಾಯಕ ಕೃಷಿ ನಿರ್ದೇಶಕ, ಸಂಯೋಜಕ ಎಚ್.ಎನ್. ಚಾಮರಾಜಪ್ಪ ಮಾತನಾಡು 9 ದಿನಗಳ ಈ ಕಾರ್ಯಕ್ರಮವು ಪ್ರತೀ ಹೋಬಳಿಗೆ ನಿಗದಿಯಾಗಿದ್ದು ಮೊದಲನೆ ದಿನ ಉದ್ಘಾಟನೆ ಹಾಗೂ ಗ್ರಾಪಂ ಮಟ್ಟದಲ್ಲಿ ರೈತರಿಗೆ ಕೃಷಿ ಸಂಬಂಧಿ ಮಾಹಿತಿ, ಪ್ರಚಾರ ಮತ್ತು ಸೌಲಭ್ಯ ವಿತರಣೆ ಕುರಿತು ಪ್ರಚಾರ ನೀಡಿ, 2ನೆ ದಿನ ಸಂಬಂಧಿಸಿದ ಹೋಬಳಿಯ ಉಳಿದ ಗ್ರಾಪಂ ಮಟ್ಟದಲ್ಲಿ ರೈತರಿಗೆ ಕೃಷಿ ಸಂಬಂಧಿ ಮಾಹಿತಿ, ಪ್ರಚಾರ ಮತ್ತು ಸೌಲಭ್ಯ ವಿತರಣೆ ಕುರಿತು ಪ್ರಚಾರ ನೀಡಲಾಗುತ್ತದೆ. 3ನೆ ದಿನ ಸಂಬಂಧಿಸದ ಹೋಬಳಿಯ ವ್ಯಾಪ್ತಿಯಲ್ಲಿರೈತ ವಿಜ್ಞಾನಿ ಸಂವಾದ ಮತ್ತು ಕೃಷಿ ವಸ್ತು ಪ್ರದರ್ಶನ ಮುಖಾಂತರ ರೈತರಿಗೆ ಕೃಷಿ ಸಂಬಂಧಿ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ನಾಯ್ಕ ಮಾತನಾಡಿ, ರೈತರು ಈ ಅಭಿಯಾನದ ಉಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ಅಭಿಯಾನದ ಯಶಸ್ಸಿಗೆ ಹಾರೈಸಿದರು. ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ನಟರಾಜ್, ರೈತರಿಗೆ ಬೆಳೆ ವಿಮೆ ಮತ್ತು ಮಣ್ಣು ಪರೀಕ್ಷೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಕಾಶ್, ಪಶು ಸಂಗೋಪನ ಅಧಿಕಾರಿ ರಾಜೇಶ್ ನಾಯ್ಕ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿಗಳನ್ನು ನೆರೆದ ರೈತರಿಗೆ ತಿಳಿಸಿದರು. ಸಮಾರಂಭದ ನಂತರ ಕೃಷಿ ಇಲಾಖಾ ಸಂಚಾರಿ ಮಾಹಿತಿ ಘಟಕ ಆರಂಭಕ್ಕೆ ಹಸಿರು ಬಾವುಟದ ಮೂಲಕ ಚಾಲನೆ ನೀಡಿದರು.
ಕೃಷಿ ಇಲಾಖೆ ಅಧಿಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳು ಉಪಸ್ಥಿತರಿದ್ದರು.







