ಬಿಜೆಪಿ ಸಂಸದೀಯ ಮಂಡಳಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ: ರಾಜನಾಥ ಸಿಂಗ್
ಉತ್ತರಪ್ರದೇಶ ಚುನಾವಣೆ
ಅಹ್ಮದಾಬಾದ್, ಜೂ.19: ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮೊದಲೇ ಬಿಂಬಿಸಬೇಕೇ ಎನ್ನುವುದನ್ನು ಬಿಜೆಪಿ ಸಂಸದೀಯ ಮಂಡಳಿ ನಿರ್ಧರಿಸಲಿದೆಯೆಂದು ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಇಂದಿಲ್ಲಿ ಹೇಳಿದ್ದಾರೆ.
ಇಲ್ಲಿಯ ವರೆಗೆ ಸಂಸದೀಯ ಮಂಡಳಿಯಲ್ಲಿ ಆ ಬಗ್ಗೆ ಚರ್ಚೆಯೇನೂ ನಡೆದಿಲ್ಲ. ಸಮಯ ಬಂದಾಗ ಸಂಸದೀಯ ಮಂಡಳಿಯು ಚರ್ಚಿಸಿ, ಆ ಕುರಿತು ನಿರ್ಧರಿಸಲಿದೆಯೆಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಪಕ್ಷವು ಪರಿಸ್ಥಿತಿಯನ್ನು ಹೊಂದಿಕೊಂಡು ನಿರ್ಧಾರವೊಂದನ್ನು ಕೈಗೊಳ್ಳಲಿದೆಯೆಂದು ರಾಜನಾಥ್ ಹೇಳಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದ ಅಸ್ಸಾಂನಲ್ಲಿ ಬಿಜೆಪಿ ಗೆದ್ದಿರುವುದು ಹಾಗೂ ಘೋಷಿಸದಿದ್ದ ಬಿಹಾರದಲ್ಲಿ ಸೋತಿರುವ ಕುರಿತು ಬೆಟ್ಟು ಮಾಡಿದ್ದಾಗ, ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸದಿದ್ದರೂ ಪಕ್ಷವು ಮಹಾರಾಷ್ಟ್ರ, ಹರ್ಯಾಣ ಹಾಗೂ ಜಾರ್ಖಂಡ್‌ಗಳಲ್ಲಿ ಗೆದ್ದಿದೆಯೆಂದು ಅವರುತ್ತರಿಸಿದ್ದಾರೆ.
ಬಿಜೆಪಿ ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಬೇಕೇ ಎಂಬುದರ ಬಗ್ಗೆ ಅವರ ವೈಯಕ್ತಿಕ ಅಭಿಪ್ರಾಯವೇನೆಂದು ಪ್ರಶ್ನಿಸಿದಾಗ, ತನ್ನ ಅಭಿಪ್ರಾಯವನ್ನು ಸಂಸದೀಯ ಮಂಡಳಿಯ ಮುಂದಿಡುವೆನೆಂದು ರಾಜನಾಥ್ ಹೇಳಿದ್ದಾರೆ.





