ಕಾರು, ಅಕ್ರಮ ಸಾಗುವಾನಿ ದಿಮ್ಮಿಗಳು ವಶಕ್ಕೆ
ಅರಣ್ಯ ಸಿಬ್ಬಂದಿಯ ಕಾರ್ಯಾಚರಣೆ

ಅಂಕೋಲಾ, ಜೂ.19: ಅಂಕೋಲಾ ವಲಯ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾರು ಹಾಗೂ ಅಕ್ರಮ ಸಾಗುವಾನಿ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡ ಘಟನೆ ವರದಿಯಾಗಿದೆ.
ಅಂದಾಜು 4ಲಕ್ಷ ರೂ. ಮೌಲ್ಯದ ಕಾರು ಸೇರಿದಂತೆ ಸುಮಾರು 30 ಸಾವಿರ ರೂ. ಮೌಲ್ಯದ ಸಾಗುವಾನಿ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ತೆರಳುತ್ತಿದ್ದ ಕಾರಿನಲ್ಲಿ ಅಕ್ರಮ ದಿಮ್ಮಿ ಸಾಗಾಟದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ.ಪೈ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಂ. ನಾಯ್ಕ ಅವರ ನೇತೃತ್ವದಲ್ಲಿ ಬಾಳಿಗುಳಿಯ ನವಗದ್ದೆ ಸಮೀಪ ಕಾರನ್ನು ಹಿಂಬಾಲಿಸಿ ಕೊಂಡು ಬರುತ್ತಿರುವುದನ್ನು ವೀಕ್ಷಿಸಿದ ಚಾಲಕ ಬಾಳಿಗುಳಿಯ ಸಮೀಪದ ಶಿರಕುಳಿ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಶೋಧನೆಗಾಗಿ ರಾಘವೇಂದ್ರ ನಾಯ್ಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಉಪ-ವಲಯ ಅರಣ್ಯಾಧಿಕಾರಿ ಸುರೇಶ್ ಆರ್. ನಾಯ್ಕ, ವೆಂಕಟಪ್ಪ ಬಿ. ಬೋಯಿನ್, ಅರಣ್ಯ ರಕ್ಷಕರಾದ ಮೋಹನ್ ಎಸ್. ನಾಯ್ಕ, ನವೀನ್ ಎಂ. ಶೆಟ್ಟಿ, ಧನಂಜಯ ಎಂ.ಮೊಗೇರ, ಮಂಜುನಾಥ್ ನಾಯಕ, ರೋಹಿತ್ ಎಂ. ನಾಯ್ಕ, ವಾಹನ ಚಾಲಕ ಜಗದೀಶ್ ನಾಯ್ಕ ಪಾಲ್ಗೊಂಡಿದ್ದರು.





