ದಿನೇಶ್ ಗುಂಡೂರಾವ್‌ರನ್ನು ಸಚಿವ ಸ್ಥಾನದಲ್ಲಿ ಉಳಿಸಿಕೊಳ್ಳಲು ಬ್ಲಾಕ್ ಕಾಂಗ್ರೆಸ್ ಒತ್ತಾಯ

ಮಡಿಕೇರಿ, ಜೂ.19: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಐದು ಬ್ಲಾಕ್ ಘಟಕಗಳು, ಸಚಿವ ಸಂಪುಟದಲ್ಲಿ ಅವರನ್ನು ಉಳಿಸಿಕೊಳ್ಳುವಂತೆ ಒತ್ತಾಯಿಸಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ , ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ವಿಚಾರದ ಹಿನ್ನೆಲೆಯಲ್ಲಿ ಐದು ಬ್ಲಾಕ್ ಘಟಕಗಳ ಸಭೆೆ ನಡೆಸಿ, ದಿನೇಶ್ ಗುಂಡೂರಾವ್‌ರನ್ನು ಮರಳಿ ಸಚಿವ ಸಂಪುಟಕ್ಕೆ ಸೇರ್ಪಡೆ ಗೊಳಿಸುವಂತೆ ಆಗ್ರಹಿಸಿ ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳುವ ಪ್ರಮುಖ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಕಳೆದ ಸಾಲಿನ ಡಿಸೆಂಬರ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ದಿನೇಶ್ ಗುಂಡೂರಾವ್, ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕವಿರಿಸಿಕೊಳ್ಳುವ ಮೂಲಕ ಪಕ್ಷದ ಬಲವರ್ಧನೆಗೆ ಸಾಕಷ್ಟು ಶ್ರಮಿಸಿದ್ದಾರೆ. ತಮ್ಮ ಇಲ್ಲಿನವರೆಗಿನ ಉಸ್ತುವಾರಿಯ ಜವಾಬ್ದಾರಿಯಲ್ಲಿ ಅವರು ಜಿಲ್ಲೆಗೆ 32 ಬಾರಿ ಭೇಟಿ ನೀಡಿ ಪಕ್ಷದ ಕಾರ್ಯಕರ್ತರಲ್ಲಿ ವಿಶೇಷ ಹುರುಪು ತುಂಬಿದ್ದರೆಂದು ಹೇಳಿದರು.
ದಿನೇಶ್ ಗುಂಡೂರಾವ್ ಅವರು ಕೊಡಗು ಉಸ್ತುವಾರಿಯೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವರಾಗಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸುವುದರಿಂದ ಕಾಂಗ್ರೆಸ್ ಪಕ್ಷಕ್ಕೂ ಪ್ರಯೋಜನವಾಗಲಿದೆಯೆಂದು ಕೆ.ಎಂ. ಗಣೇಶ್ ಅಭಿಪ್ರಾಯಪಟ್ಟರು.
ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನ ಪ್ರಯತ್ನಗಳನ್ನು ಮಾಡುವ ಸೌಜನ್ಯತೆ ಹೊಂದಿದ್ದ ದಿನೇಶ್ ಗುಂಡೂರಾವ್ ಅವರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಉತ್ತಮವಾಗಿ ಸಂಘಟಿಸಿ ಮುಂದಿನ 2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಉದ್ದೇಶ ಹೊಂದಿದ್ದಾಗಿ ಅವರು ತಿಳಿಸಿದರು.
ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ದಿನೇಶ್ ಗುಂಡೂರಾವ್ ಅವರು ಉಸ್ತುವಾರಿಯಾಗಿದ್ದ ಅವಧಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ಸಾಧ್ಯವಾಗದೆ ಇದ್ದ ಕಂದಾಯ ಗ್ರಾಮಗಳ ಘೋಷಣೆಯ ಮಹತ್ವದ ಕಾರ್ಯವನ್ನು ನಡೆಸಿದ್ದರು. ಅವರಿಂದ ಮತ್ತಷ್ಟು ನಿರೀಕ್ಷೆಗಳನ್ನು ಕೊಡಗು ಜಿಲ್ಲೆಯ ಜನತೆ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಬೇಕೆಂದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಕಲ್ ರಮಾನಾಥ್ ಮಾತನಾಡಿ, ಸಚಿವ ಸಂಪುಟ ಪುನರ್ ರಚನೆಯಲ್ಲಿ ದಿನೇಶ್ ಗುಂಡೂರಾವ್ ಅವರನ್ನು ಕೈಬಿಟ್ಟಿರುವುದು ಜಿಲ್ಲಾ ಕಾಂಗ್ರೆಸಿಗರಿಗೆ ಅತೀವ ನೋವನ್ನುಂಟುಮಾಡಿದೆ. ಈಗಾಗಲೇ ಸಭೆಯ ನಿರ್ಣಯದಂತೆ ಪಕ್ಷದ ರಾಜ್ಯಾಧ್ಯಕ್ಷರಿಗೆ, ದಿನೇಶ್ ಗುಂಡೂರಾವ್ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸುವಂತೆ ಕೋರಿ ಫ್ಯಾಕ್ಸ್ ಸಂದೇಶ ಕಳುಹಿಸಿರುವುದಾಗಿ ತಿಳಿಸಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ದಿನೇಶ್ ಗುಂಡೂರಾವ್ ಅವರನ್ನು ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಎಐಸಿಸಿ ಮತ್ತು ರಾಜ್ಯ ಕಾಂಗ್ರೆಸ್‌ನಲ್ಲಿ ಬಳಸಿಕೊಳ್ಳುವ ಉದ್ದೇಶಗಳ ಹಿನ್ನೆಲೆಯಲ್ಲಿ ಸಚಿವ ಸಂಪುಟದಿಂದ ಕೈಬಿಡಲಾಗಿದೆಯಾದ್ದರಿಂದ ಇದೊಂದು ಹಿನ್ನಡೆಯಲ್ಲ. ಹೀಗಿದ್ದೂ ಉತ್ತಮ ಸಂಘಟನಾ ಸಾಮರ್ಥ್ಯ ಹೊಂದಿದ ದಿನೇಶ್‌ರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಬೇಕಿತ್ತೆಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಹಾಗೂ ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಾಮ್ ಉಪಸ್ಥಿತರಿದ್ದರು.







