ಅಪಾಯಕ್ಕೆ ಕಾರಣವಾಗುತ್ತಿರುವ ಮೋಜು ಮಸ್ತಿ
ಅಬ್ಬಿಫಾಲ್ಸ್ ವೈಭವದಲ್ಲಿ ಮಿಂದೆದ್ದ ಪ್ರವಾಸಿಗರ ದಂಡು

ಮಡಿಕೇರಿ, ಜೂ.19: ಮಡಿಕೇರಿ ಸುತ್ತಮುತ್ತ ಭಾರಿ ಮಳೆಯಾಗುತ್ತಿದ್ದರೂ ಪ್ರವಾಸಿಗರ ಆಗಮನದಲ್ಲಿ ಕೊರತೆಯಾಗಿಲ್ಲ. ವಾರದ ಕೊನೆಯ ದಿನವಾದ ರವಿವಾರ ದಾಖಲೆ ಸಂಖ್ಯೆಯ ಪ್ರವಾಸಿಗರು ಹೆಸರುವಾಸಿ ಪ್ರವಾಸಿತಾಣ ಅಬ್ಬಿಫಾಲ್ಸ್‌ಗೆ ಆಗಮಿಸಿದ್ದರು.
ಈ ಹಿಂದೆ ಬೇಸಿಗೆ ಹಾಗೂ ನಿರಂತರ ರಜೆಗಳಿಗಷ್ಟೇ ಸೀಮಿತವಾಗಿದ್ದ ಕೊಡಗಿನ ಪ್ರವಾಸಿಗರ ಭೇಟಿ ಇತ್ತೀಚಿನ ದಿನಗಳಲ್ಲಿ ವರ್ಷ ಪೂರ್ತಿಗೆ ಸೀಮಿತವಾಗುತ್ತಿದೆ. ಪ್ರವಾಸೋದ್ಯಮದ ರುಚಿ ಕಂಡವರು ಸರ್ವಕಾಲಕ್ಕೂ ಪ್ರವಾಸಿಗರ ಆಗಮನವಾಗಬೇಕೆನ್ನುವ ಉದ್ದೇಶದಿಂದ ಮಾನ್ಸೂನ್ ಟೂರಿಸಂ ಎನ್ನುವ ಪರಿಕಲ್ಪನೆಯನ್ನು ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಬಿತ್ತುತ್ತಿದ್ದಾರೆ. ಇದರ ಪರಿಣಾಮವಾಗಿ ಕೊಡಗಿನೆಡೆಗೆ ಪ್ರವಾಸಿಗರು ಆಕರ್ಷಿತರಾಗುತ್ತಿದ್ದಾರೆ. ಮಳೆಗಾಲ ಆರಂಭವಾಗಿ ಎರಡು ವಾರ ಕಳೆದಿದ್ದು, ಈ ಮಳೆಯ ದಿನಗಳಲ್ಲೂ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿದೆ. ಶನಿವಾರ, ರವಿವಾರ ದಿನಗಳಲ್ಲಂತೂ ಹೆಸರುವಾಸಿ ಪ್ರವಾಸಿತಾಣಗಳು ಪ್ರವಾಸಿಗರಿಂದ ತುಂಬಿರುತ್ತವೆ. ಪ್ರವಾಸಿಗರಲ್ಲಿ ಹೆಚ್ಚಿನವರು ಯುವ ಸಮೂಹ ಎನ್ನುವುದು ಮತ್ತೊಂದು ವಿಶೇಷ.
ಈ ರವಿವಾರ ಅಬ್ಬಿಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಶನಿವಾರ ಧಾರಾಕಾರ ಮಳೆ ಸುರಿದ ಪರಿಣಾಮ ತುಂಬಿ ಹರಿಯುತ್ತಿದ್ದ ಜಲಪಾತದ ಸೊಬಗಿಗೆ ಪ್ರವಾಸಿಗರು ಆಕರ್ಷಿತರಾಗಿದ್ದರು. ತೋಡು ಮತ್ತು ಚರಂಡಿಗಳಿಂದ ಹರಿದು ಬಂದ ನೀರೂ ಬೆರೆತಿದ್ದರಿಂದ ದುರ್ವಾಸನೆ ಬೀರುತ್ತಿದ್ದರೂ ಜಲಪಾತಕ್ಕೆ ಇಳಿಯುವ ದುಸ್ಸಾಹಸಕ್ಕೆ ಪ್ರವಾಸಿಗರು ಮುಂದಾದ ಪ್ರಸಂಗಗಳೂ ನಡೆಯಿತು. ನೀರಿಗಿಳಿಯಲು ಅವಕಾಶವನ್ನು ನಿರ್ಬಂಧಿಸಲಾಗಿದ್ದರೂ, ತೂಗು ಸೇತುವೆ ಶಿಥಿಲಗೊಂಡಿದ್ದರೂ ಕಡಿದಾದ ಕಾಲು ದಾರಿಯಲ್ಲಿ, ಅಪಾಯಕಾರಿ ಸ್ಥಿತಿಯಲ್ಲಿ ಎತ್ತರಕ್ಕೆ ಏರುವ ಪ್ರಯತ್ನವನ್ನು ಯುವಸಮೂಹ ಮಾಡುತ್ತಿದ್ದ ದೃಶ್ಯ ಕಂಡು ಬಂತು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಅಪಾಯದ ಕುರಿತು ಬುದ್ದಿ ಹೇಳಿ ದುಸ್ಸಾಹಕ್ಕೆ ಕೈ ಹಾಕಿದ್ದ ಪ್ರವಾಸಿಗರಿಗೆ ಗದರಿಸಿದರು. ಮೋಜು-ಮಸ್ತಿಯ ಮೂಲಕ ಅಪಾಯವನ್ನು ತಂದೊಡ್ಡಿಕೊಳ್ಳುತ್ತಿರುವ ಪ್ರವಾಸಿಗರ ವರ್ತನೆ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರವಿವಾರ ಅಬ್ಬಿಫಾಲ್ಸ್‌ಗೆ ಆಗಮಿಸಿದ ದಾಖಲೆಯ ಸಂಖ್ಯೆಯ ಪ್ರವಾಸಿಗರಿಂದ ಸ್ಥಳೀಯ ಗ್ರಾಪಂ ಗೆ ವಾಹನಗಳ ನಿಲುಗಡೆ ಶುಲ್ಕ ಕೂಡ ಅಧಿಕ ಸಂಗ್ರಹವಾಗಿದೆ. ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಪ್ರವಾಸಿತಾಣಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಸಿಗರಿಂದ ಬರುವ ಆದಾಯವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಳ್ಳದೆ ಪ್ರವಾಸಿಗರಿಗೂ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು ಮತ್ತು ಪ್ರವಾಸಿಗರ ಅನುಚಿತ ವರ್ತನೆಗಳಿಂದ ಸ್ಥಳೀಯರಿಗೆ ಹಾನಿಯಾಗದಂತೆ ಎಚ್ಚರ ವಹಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.







