‘ಅಂಡರ್‌ಪಾಸ್ ರಸ್ತೆ ವಿಚಾರದಲ್ಲಿ ರಾಜಕೀಯ ಬೇಡ:ಸತೀಶ ನಾಯಕ

ಅಂಕೋಲಾ, ಜೂ.19: ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ಕಾಮಗಾರಿಯು ನಡೆಯುತ್ತಿದ್ದು, ಹೊನ್ನಾರಾಕಾ ದೇವಸ್ಥಾನದ ಎದುರಿನ ವೃತ್ತದಲ್ಲಿ ಸರ್ಕಲ್ ಮಾಡುವ ಉದ್ದೇಶವನ್ನು ಐಆರ್‌ಬಿ ಕಂಪೆನಿಯ ಇಂಜಿನಿಯರ್ ಹೊಂದಿದ್ದರು. ಈ ವಿಷಯವನ್ನು ತಿಳಿದ ನಾವು ಅಂಡರಪಾಸ್ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಈಗ ಕಾಮಗಾರಿ ನಡೆಯುತ್ತಿದ್ದು, ಅಪ್ಪಟ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಕೆಲವರು ತಾವೇ ಮಾಡಿಸಿದ್ದು ಎಂದು ಕೀಳು ಮಟ್ಟದ ಪ್ರಚಾರಕ್ಕೆ ಇಳಿದಿರುವುದು ವಿಷಾದನೀಯ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ ನಾಯಕ ಯಾನೆ ಪುಟ್ಟು ಬೊಮ್ಮಿಗುಡಿ ಹೇಳಿದರು.
ಪಟ್ಟಣದ ಖಾಸಗಿ ಹೊಟೇಲೊಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿಯೇ ಅಂಡರಪಾಸ್ ಯೋಜನೆ ಮಾಡಬೇಕು ಎಂದು ಾವು ಪ್ರಯತ್ನಿಸುತ್ತಲೇ ಬಂದಿದ್ದೇವೆ. ಇದರಿಂದಾಗಿ ಪ್ರತಿಯೊಬ್ಬರಿಗೂ ಅನುಕೂಲವಾಗಲಿ ಎಂದರು.
ಗುಣ ಹರ್ಕಡೆ ಮಾತನಾಡಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಎಸ್.ಹೆಗಡೆ ಅವರಿಂದ ಮಾಹಿತಿಯನ್ನು ಪಡೆದು ಇದು ಕೇಂದ್ರದ ಯೋಜನೆಯಾಗಿರುವುದರಿಂದ ಸಂಸದರಿಂದ ಶಿಫಾರಸ್ಸು ಪತ್ರವನ್ನು ತಂದು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿದ ಪರಿಣಾಮ ಇಂದು ಈ ಕಾಮಗಾರಿ ನಡೆಯುತ್ತಿದೆ ಎಂದರು. ಈ ಕುರಿತು ನಾವು ಎಲ್ಲಿಯೂ ಪ್ರಚಾರ ಮಾಡಿಕೊಳ್ಳದೆ ಮೌನವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರಿಂದ ಇದು ಯಶಸ್ವಿಯಾಗಿದೆ. ಸುದ್ದಿಗೋಷ್ಠಿಯಲ್ಲಿ ಅರ್ಬನ್ ಬ್ಯಾಂಕ್ ನಿರ್ದೇಶಕ ಉಮೇಶ ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ವಾಮನ ನಾಯ್ಕ, ವಿನಾಯಕ ನಾಯಕ ಉಪಸ್ಥಿತರಿದ್ದರು.







