ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಂಜುವುದಿಲ್ಲ: ಶ್ರೀನಿವಾಸಪ್ರಸಾದ್
ಮೈಸೂರು, ಜೂ.19: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದಿಂದ ಕೈಬಿಟ್ಟಿರುವ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ರಾಜಕಾರಣಿ, ರಾಜಕೀಯ ಮುತ್ಸದ್ದಿ ವಿ.ಶ್ರೀನಿವಾಸಪ್ರಸಾದ್, ಸಿದ್ದರಾಮಯ್ಯ, ನೀನು ಹಳೆಯದನ್ನು ಮರೆತಿದ್ದೀಯ? ಜೆಡಿಎಸ್‌ನಿಂದ ಹೊರಬಂದಾಗ ನಡೆದ ಘಟನೆಗಳನ್ನು ಮರೆತಿದ್ದೀಯ? ಎಂದು ಪ್ರಶ್ನಿಸಿ ಅಸಮಾಧಾನ ಹೊರಹಾಕಿದ್ದಾರೆ.
ಕಂದಾಯ ಸಚಿವರಾಗಿ ಮೂರು ವರ್ಷಗಳ ಆಡಳಿತ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಕಾರ್ಯನಿರ್ವಹಿಸಿದ ನನಗೆ ಯಾವುದೇ ಸೂಚನೆ ನೀಡದೆ ಸಚಿವ ಸಂಪುಟದಿಂದ ಹೊರಹಾತ್ತಿರುವುದಕ್ಕೆ ನಾನು ಅಂಜುವುದೂ ಇಲ್ಲ, ಸುಮ್ಮನೆ ಕೂರುವುದೂ ಇಲ್ಲ್ಲ. ಕಾಂಗ್ರೆಸ್‌ನಲ್ಲಿ ಕಿತ್ತುಕೊಳ್ಳುವ ಸಂಪ್ರದಾಯ ಇದೇನು ಹೊಸದಲ್ಲ, ಹಿಂದೊಮ್ಮೆ ನಾನು 4 ಬಾರಿ ಸಂಸದನಾಗಿ ಆಯ್ಕೆಯಾದರೂ ಆ ದಿನಗಳಲ್ಲಿಯೇ ನನಗೆ ಟಿಕೆಟ್ ನೀಡಲು ಹಿಂದೇಟು ಹಾಕಲಾಗಿತ್ತು ಎಂದು ಸ್ಮರಿಸಿಕೊಂಡರು.
ಇನ್ನು ಹಲವು ವರ್ಷಗಳ ತಮ್ಮ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಂಧವ್ಯದ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಸಾದ್, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆತಂದವನು ನಾನು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕಾದರೆ ನನ್ನ ಕೊಡುಗೆಯೂ ಇದೆ. ಆದರೆ, ಈಗ ಸಿದ್ದರಾಮಯ್ಯ ಅವರಿಗೆ ನಾನು ಬೇಕಿಲ್ಲ, ಅವರ ಬಳಿ ಯಾರಿರುತ್ತಾರೋ ಅವರೇ ಅವರಿಗೆ ಮುಖ್ಯ. ಅದಕ್ಕಾಗಿಯೇ ಅಂತಹವರನ್ನು ತಮ್ಮ ಸಚಿವ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ. ಇದೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಬೆಳವಣಿಗೆಗಳಲ್ಲ, ನಮ್ಮ ಪಕ್ಷ ಅಧಿಕಾರದಲ್ಲಿದ್ದರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆ ಇಲ್ಲ. ಮುಂದಿನ ಬಾರಿ ದಲಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಮಾಹಿತಿಯಿಂದ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಭಾವುಕರಾದರು.
ಇನ್ನು ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿದ ಅವರು, ಸದ್ಯಕ್ಕೆ ನಾನು ತಟಸ್ಥವಾಗಿರುತ್ತೇನೆ. ಸಚಿವ ಸ್ಥಾನಕ್ಕೆ ಹೈಕಮಾಂಡ್ ಭೇಟಿ ಮಾಡಲ್ಲ. ತಮ್ಮ ರಾಜಕೀಯ ಹಿತೈಷಿಗಳು ಮತ್ತು ಬೆಂಬಲಿಗರು ಮತ್ತು ನನಗೆ ಮತ ನೀಡಿದ ಕ್ಷೇತ್ರ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ನಡೆಯ ಕುರಿತು ಚರ್ಚಿಸುವುದಾಗಿ ತಿಳಿಸಿದರು.







