ಶಿವಮೊಗ್ಗ ಪಾಲಿಕೆಯಿಂದ ಅಗತ್ಯ ಕ್ರಮ: ಮೇಯರ್ ಎಸ್.ಕೆ. ಮರಿಯಪ್ಪ
ಸಾಂಕ್ರಾಮಿಕ ರೋಗ ತಡೆಗೆ ಸ್ವಚ್ಛತಾ ಆಂದೋಲನಾ ಸಪ್ತಾಹ
ಶಿವಮೊಗ್ಗ,: ಜೂ.19: ನಗರವನ್ನು ಸಾಂಕ್ರಾಮಿಕ ರೋಗ ಮುಕ್ತ ನಗರವನ್ನಾಗಿ ಮಾಡಲು ಮಹಾನಗರ ಪಾಲಿಕೆಯಿಂದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ಎಸ್.ಕೆ. ಮರಿಯಪ್ಪಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಸಹಯೋಗದಲ್ಲಿ ನಗರದ ವಿದ್ಯಾನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಕ್ರಾಮಿಕ ರೋಗಗಳು ಹರಡದಂತೆ ಹಮ್ಮಿಕೊಂಡಿರುವ ಸ್ವಚ್ಚತಾ ಆಂದೋಲನಾ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಎಲ್ಲ ಪ್ರದೇಶಗಳಲ್ಲಿ ವಿಶೇಷವಾಗಿ ಮಳೆ ನೀರು ನಿಲ್ಲುವ ಹಾಗೂ ಕೆಲವು ಕೊಳೆಗೇರಿ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅಲ್ಲದೆ ನಾಗರಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾಲ ಕಾಲಕ್ಕೆ ಬ್ಲೀಚಿಂಗ್ ಸಿಂಪಡಣೆ, ಸೊಳ್ಳೆಗಳು ಹೆಚ್ಚದಂತೆ ಧೂಮೀಕರಣ ಮಾಡಲಾಗುತ್ತಿದೆ. ಈ ಮೂಲಕ ಆದಷ್ಟು ಸಾಂಕ್ರಾಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯಿಂದ ಜಿಲ್ಲಾದ್ಯಂತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ, ಸ್ವಚ್ಛತೆ ಯಾಕೆ ಮುಖ್ಯ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದ ಅವರು, ನಾಗರಿಕರು ಸ್ವಯಂ ಪ್ರೇರಿತರಾಗಿ ಸ್ವಚ್ಛತೆ ಬಗ್ಗೆ ಕಾಳಜಿ ತೋರಬೇಕು. ಇಲ್ಲವಾದರೆ, ಡೆಂಗ್, ಮಲೇರಿಯಾ, ಚಿಕುನ್ ಗುನ್ಯಾ, ಕರಳು ಬೇನೆಯಂತಹ ಸಾಂಕ್ರಾಮಿಕ ರೋಗಗಳು ತಲೆದೋರಲಿವೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದರು.
ಜೂನ್ 16ರಿಂದ 22ರವೆರೆಗೆ ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲಾದ್ಯಂತ ಸ್ವಚ್ಛತಾ ಆಂದೋಲನಾ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರ ಕೊಳೆಗೇರಿ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. 17ರಂದು ನಿರ್ಮಾಣ ಪ್ರದೇಶಗಳಲ್ಲಿ, 18ರಂದು ಶಿಕ್ಷಣ ಸಂಸ್ಥೆಗಳಲ್ಲಿ, 19ರಂದು ಸರಕಾರಿ ಕಟ್ಟಡಗಳಲ್ಲಿ, 20ರಂದು ಸಾರ್ವಜನಿಕ ಪ್ರದೇಶಗಳಲ್ಲಿ, 21ರಂದು ಆಸ್ಪತ್ರೆಗಳಲ್ಲಿ ಹಾಗೂ 22ರಂದು ಕಾರ್ಖಾನೆಗಳಲ್ಲಿ ಸ್ವಚ್ಛತಾ ಆಂದೋಲನ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕಾಶಿವಿಶ್ವನಾಥ, ಐಡಿಯಲ್ ಗೋಪಿ, ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ.ಜಯರಾಜ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.







