ಚುಟುಕು ಸುದ್ದಿಗಳು
ಕಳವು ಆರೋಪಿಗಳ ಬಂಧನ
1.70 ಲಕ್ಷ ರೂ. ವೌಲ್ಯದ ಚಿನ್ನಾಭರಣ ವಶಕ್ಕೆ
ಮಂಗಳೂರು, ಜೂ. 19: ನಗರ ಕೆಲವು ಕಡೆಗಳಲ್ಲಿ ಮಹಿಳೆಯರ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಉರ್ವ ಠಾಣಾ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೋಳಾರದ ಬತ್ತೇರಿ ಗಾರ್ಡನ್ ನಿವಾಸಿ ರೋಹಿತ್ ಕುಮಾರ್ (26) ಮತ್ತು ನಗರದ ಪ್ರಜ್ವಲ್ ಶೆಟ್ಟಿ ಎಂದು ಗುರುತಿಸಲಾಗಿದೆ.
ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಕುತ್ತಿಗೆಯಿಂದ ಸರವನ್ನು ಕಸಿದು ಪರಾರಿಯಾಗುತ್ತಿದ್ದ ಪ್ರಕರಣಗಳು ಹೆಚ್ಚುತ್ತಿದ್ದು, ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು ಇಬ್ಬರನ್ನು ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಸೆರೆ ಹಿಡಿದಿದ್ದಾರೆ.
ಆರೋಪಿಗಳಲ್ಲಿ ರೋಹಿತ್ ಕುಮಾರ್ ನಗರದ ನಾಲ್ಕು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಚಿನ್ನಾಭರಣ ಕಳವು ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈತ ಕಳವುಗೈದಿದ್ದ ಚಿನ್ನವನ್ನು ಪ್ರಜ್ವಲ್ ಶೆಟ್ಟಿಯೊಂದಿಗೆ ಮಾರಾಟ ಮಾಡಲು ನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಬಳಿಯಲ್ಲಿ ಪೊಲೀಸರು ವಶಕ್ಕೆ ಪಡೆದು ಅವರಿಂದ 1.70 ಲಕ್ಷ ರೂ. ವೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಚಾಲಕನಿಗೆ ದುಷ್ಕರ್ಮಿಗಳಿಂದ ಹಲ್ಲೆ
ಉಳ್ಳಾಲ, ಜೂ.19: ನಾಲ್ವರ ತಂಡವೊಂದು ಬಸ್ ಚಾಲಕನಿಗೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಡೆದಿದ್ದು ಬಸ್ ಚಾಲಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳ್ಮ ಗ್ರಾಮದ ಬರುವ ನಿವಾಸಿ ನವೀನ್ ಡಿಸೋಜ(24) ಹಲ್ಲೆಗೊಳಗಾದ ಬಸ್ ಚಾಲಕರಾಗಿದ್ದಾರೆ. ಮಂಗಳೂರಿನಿಂದ ಉಳ್ಳಾಲ, ಸೋಮೇಶ್ವರ ಮಾರ್ಗವಾಗಿ ಸಂಚರಿಸುವ ಕರಾವಳಿ ಟ್ರಾವೆಲ್ಸ್ (44ಎ)ಬಸ್ ಶನಿವಾರ ಸಂಜೆ ಹೊತ್ತಿಗೆ ಮಂಗಳೂರಿನಿಂದ ಸೋಮೇಶ್ವರಕ್ಕೆ ತೆರಳುತ್ತಿದ್ದಾಗ ಉಳ್ಳಾಲ ಮುಕ್ಕಚ್ಚೇರಿಯಲ್ಲಿ ಸ್ಥಳೀಯನಾದ ನಿಸಾರ್(23)ಬಸ್ ಹತ್ತಿ ಚಾಲಕನ ಎಡ ಬದಿಯಲ್ಲಿರುವ ಟೂಲ್ಸ್ ಬಾಕ್ಸ್ ಸೀಟಲ್ಲಿ ಕುಳಿತಿದ್ದು ಬಸ್ಸು ಚಾಲಕ ನವೀನ್ ಅವರು ಮುಂದಿನ ಬಸ್ಸು ತಂಗುದಾಣದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಬರುವವರಿದ್ದು ಹಿಂದಿನ ಸೀಟಲ್ಲಿ ಕೂರುವಂತೆ ಹೇಳಿದ್ದಾರೆ. ಇದಕ್ಕೆ ಕುಪಿತಗೊಂಡ ನಿಸಾರ್ ಚಾಲಕ ನವೀನ್‌ಗೆ ಅವ್ಯಾಚ್ಯವಾಗಿ ನಿಂದಿಸಿದ್ದು ಸೋಮೇಶ್ವರದವರೆಗೆ ಬಸ್ಸಲ್ಲೇ ಪ್ರಯಾಣಿಸಿದ್ದು ಬಸ್ಸು ಅಲ್ಲಿಂದ ಹಿಂದಿರುಗಿ ಉಳ್ಳಾಲಕ್ಕೆ ಬರುವಾಗ ನಿಸಾರ್ ಮುಕ್ಕಚ್ಚೇರಿಯಲ್ಲೇ ಇಳಿದುಹೋಗಿದ್ದಾನೆ. ಬಸ್ ಮಂಗಳೂರಿಗೆ ತೆರಳಿ ಮತ್ತೆ ಸೋಮೇಶ್ವರದ ಕಡೆ ಪ್ರಯಾಣಿಸುತ್ತಿದ್ದ ವೇಳೆ ಮುಕ್ಕಚ್ಚೇರಿಯಲ್ಲೇ ನಿಸಾರ್ ತನ್ನ ಇತರ ಮೂವರು ಸಹಚರರೊಂದಿಗೆ ಸೇರಿ ಬಸ್ಸನ್ನು ಅಡ್ಡಗಟ್ಟಿ ಚಾಲಕ ನವೀನ್‌ಗೆ ಅವಾಚ್ಯವಾಗಿ ಬೈದು ತಲೆಯ ಹಿಂಭಾಗಕ್ಕೆ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು ಗಂಭೀರ ಗಾಯಗೊಂಡ ನವೀನ್ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸು ದಾಖಲಾಗಿದ್ದು ಆರೋಪಿಗಳ ಬಂಧನಕ್ಕೆ ಉಳ್ಳಾಲ ಪೊಲೀಸರು ಬಲೆ ಬೀಸಿದ್ದಾರೆ.
ವಿದ್ಯುತ್ ಆಘಾತ: ಲಾಂಡ್ರಿ ನೌಕರ ಮೃತ್ಯು
ಮಲ್ಪೆ, ಜೂ.19: ಬಟ್ಟೆ ಒಗೆಯುವ ಮೆಶಿನ್‌ನಲ್ಲಿ ವಿದ್ಯುತ್ ಹರಿದು ಲಾಂಡ್ರಿ ನೌಕರನೊಬ್ಬ ಮೃತಪಟ್ಟ ಘಟನೆ ಶನಿವಾರ ಸಂಜೆ ವೇಳೆ ಮೂಡುತೋನ್ಸೆ ಎಂಬಲ್ಲಿ ನಡೆದಿದೆ.
ಮೃತರನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಮೇಶ(20) ಎಂದು ಗುರುತಿಸಲಾಗಿದೆ. ಇವರು ಕಳೆದ ಎರಡು ವರ್ಷಗಳಿಂದ ಅಮಿತ್ ಪೂಜಾರಿಯವರ ಸೂಪರ್ ಲಾಂಡ್ರಿಯಲ್ಲಿ ಬಟ್ಟೆ ವಾಶ್ ಮಾಡುವ ಕೆಲಸ ಮಾಡುತ್ತಿದ್ದು, ನಿನ್ನೆ ಪೈಪ್ ಮುಖಾಂತರ ವಾಷಿಂಗ್ ಮಶಿನ್‌ಗೆ ನೀರು ತುಂಬಿಸುವಾಗ ಆಕಸ್ಮಿಕವಾಗಿ ನೀರಿನಲ್ಲಿ ವಿದ್ಯುತ್ ಸಂಚರಿಸಿ ಕೆಳಗೆ ಬಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಮೇಶ್‌ರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ನಾಪತ್ತೆ
ಮಣಿಪಾಲ, ಜೂ.19: ಬಸ್‌ನಲ್ಲಿ ಕ್ಲಿನರ್ ಕೆಲಸ ಮಾಡಿಕೊಂಡಿದ್ದ ಪರ್ಕಳ ಸಣ್ಣಕ್ಕಿಬೆಟ್ಟು ನಿವಾಸಿ ಹರೀಶ್ ನಾಯಕ್ (45) ಎಂಬವರು ಮೇ28ರಂದು ಮನೆಯಿಂದ ಹೋದವರು ಮನೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ ಯೋಗ ಪ್ರಜ್ಞಾ ಕಾರ್ಯಕ್ರಮ
ಉಡುಪಿ, ಜೂ.19: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಉಡುಪಿಯ ಯೋಗ ಸಂಸ್ಥೆಗಳಲ್ಲಿ ಒಂದಾದ ಸ್ಥಿತಿ ಯೋಗ ಕುಂಜನ ಹಾಗೂ ಮಣಿಪಾಲದ ಯೋಗಾಂತರ್ ಇದರ ಜಂಟಿ ಆಶ್ರಯದಲ್ಲಿ ಜೂ.21ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ‘ಯೋಗಪ್ರಜ್ಞಾ’ ಎಂಬ ಯೋಗ ಜಾಗೃತಿ ಶಿಬಿರವೊಂದು ನಡೆಯಲಿದೆ ಎಂದು ಯೋಗ ಚಿಕಿತ್ಸಕಿ ಡಾ. ಮಂಜರಿ ಚಂದ್ರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 8:30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಮೊದಲು ಡಾ.ಮಂಜರಿಚಂದ್ರ ಆಸನಗಳ ಉದ್ದೇಶ ಮತ್ತು ಮಾಡುವ ಕ್ರಮದ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಲಿದ್ದಾರೆ. ಬಳಿಕ ಯೋಗ ಪಟು ಮತ್ತು ದೈಹಿಕ ತರಬೇತುದಾರ ಮಣಿಪಾಲದ ಪ್ರದೀಪಾ ಎನ್.ಅರಚ್ಚಿಗೆ ಅವರು ‘ಎನರ್ಜಿ ಸಿಸ್ಟಮ್ ಆಫ್ ಬಾಡಿ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಬೆಳಗ್ಗೆ 10:15ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಪತ್ರಿಕಾಗೋಷ್ಠಿಯಲ್ಲಿ ಪ್ರದೀಪಾ ಎನ್.ಅರಚ್ಚಿಗೆ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.
ನೇಣು ಬಿಗಿದು ಆತ್ಮಹತ್ಯೆ
ಮಂಜೇಶ್ವರ, ಜೂ.19: ಆಟೊ ಚಾಲಕನೊಬ್ಬ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕುಂಜತ್ತೂರು ಸಮೀಪದ ಬಾಚಲಿಕೆ ಎಂಬಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಕುಂಜತ್ತೂರು ಚಾಚಲಿಕೆಯ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆಟೊ ಚಾಲಕ ನಾಸಿರ್(26) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರವಿವಾರ ಬೆಳಿಗ್ಗೆ 11 ಗಂಟೆಯ ತನಕ ಕುಂಜತ್ತೂರು ಪರಿಸರದಲ್ಲಿ ಆಟೊ ಚಲಾಯಿಸುತ್ತಿದ್ದ ಇವರು ಮನೆಗೆ ತೆರಳಿ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಮಾಡಿರುವುದಾಗಿ ಹೇಳಲಾಗಿದೆ. ಮನೆಯವರು ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರು ಮೃತ ಪಟ್ಟಿದ್ದಾರೆಂದು ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ವ್ಯಕ್ತಿಯ ಅನುಮಾನಾಸ್ಪದ ಸಾವು
ಮಲ್ಪೆ, ಜೂ.19: ಕನ್ನರ್ಪಾಡಿ ಜಯದುರ್ಗಾ ಯುವಕ ಮಂಡಲದಲ್ಲಿ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಕನ್ನರ್ಪಾಡಿ ಜನ್ನಿಬೆಟ್ಟುವಿನ ನಿರಂಜನ ಶೆಟ್ಟಿ(42) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ 10ಗಂಟೆಗೆ ಮನೆಯಿಂದ ಹೋದ ನಿರಂಜನ್ ಶೆಟ್ಟಿ ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ರವಿವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಅವರ ಮೃತದೇಹ ಪತ್ತೆಯಾಗಿದೆ. ಅವರ ತಲೆಯಲ್ಲಿ ರಕ್ತ ಸೋರುತ್ತಿರುವುದು ಕಂಡು ಬಂದಿದೆ.
ಕುಡಿಯುವ ಚಟಹೊಂದಿದ್ದ ಇವರು ಕೆಳಗ್ಗೆ ಬಿದ್ದು ತಲೆಗೆ ಗಾಯಗೊಂಡು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ವ್ಯಕ್ತಿ ಆತ್ಮಹತ್ಯೆ
ಕೋಟ, ಜೂ.19: ವೈಯಕ್ತಿಕ ಕಾರಣ ದಿಂದ ಮನನೊಂದಕೋಟತಟ್ಟು ಗ್ರಾಮದ ಕಲ್ಮಾಡಿ ರಸ್ತೆ ಸಮೀಪದ ಮಟಪಾಡಿ ನಿವಾಸಿ ಗೋಪಾಲ ಗಾಣಿಗ (55) ಎಂಬವರು ರವಿವಾರ ಬೆಳಗಿನ ಜಾವ ಮನೆಯ ಮಹಡಿಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಯಿಲ ಗ್ರಾಮದಲ್ಲಿ ಫಾಗಿಂಗ್
ವಿಟ್ಲ, ಜೂ.19: ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಹೋರಂಗಳ ಎಂಬಲ್ಲಿ ಶಂಕಿತ ಡೆಂಗ್ ಪ್ರಕರಣ ಕಾಣಿಸಿ ಕೊಂಡ ಹಿನ್ನಲೆಯಲ್ಲಿ ಶನಿವಾರ ಫಾಗಿಂಗ್ ನಡೆಸಲಾಯಿತು. ರಾಯಿ ಗ್ರಾಪಂ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ರಾಘವ ಅಮೀನ್, ಆರೋಗ್ಯ ಸಹಾಯಕ ಅನ್ವರ್ ಫಾಂಗಿಂಗ್‌ಗೆ ಮಾರ್ಗದರ್ಶನ ನೀಡಿದರು.
ಕಾರ್ಕಳ ಮಹಿಳೆಯರಿಂದ ಯಕ್ಷಗಾನ ಪ್ರದರ್ಶನ
ಕಾರ್ಕಳ, ಜೂ.19: ಕಾರ್ಕಳ ಎಸ್‌ವಿಟಿ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕಿ ಉಷಾ ನಾಯಕ್ ನೇತೃತ್ವದ ಹಿರ್ಗಾನ ಲಕ್ಷ್ಮೀಪುರ ಶ್ರೀ ಮಹಾಲಕ್ಷ್ಮೀ ಮಹಿಳಾ ಯಕ್ಷಕಲಾ ಮಂಡಳಿಯ ಕಲಾವಿದರಿಂದ ಮುಂಬೈ ಡೊಂಬಿವಿಲಿ ಶ್ರೀವರದ ಸಿದ್ಧಿವಿನಾಯಕ ಸೇವಾ ಮಂಡಳಿ ಪ್ರಾಯೋಜಕತ್ವದಲ್ಲಿ ಶ್ರೀವರದ ಸಿದ್ಧಿವಿನಾಯಕ ಸಭಾಂಗಣದಲ್ಲಿ ಇತ್ತೀಚೆಗೆ ‘ಭೀಷ್ಮ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾದ ಉಡುಪಿಯ ಕೆ.ಜೆ.ಗಣೇಶ್ ಹಾಗೂ ಕೆ.ಜೆ. ಸುಧೀಂದ್ರರವರ ತಂಡ ಸಹಕರಿಸಿತು. ಮುಮ್ಮೇಳದಲ್ಲಿ ಉಷಾ ನಾಯಕ್, ಶೋಭಾ ಪ್ರಭು, ಮಾಲತಿ ಪ್ರಭು, ಪ್ರಿಯಾಂಕಾ, ಶ್ರೀರಕ್ಷಾ, ಸುಪ್ರೀತಾ, ಶಾಂಭವಿ ನಾಯಕ್, ಸುಮತಿ ಪ್ರಭು, ರಕ್ಷಾ, ಸುಚೇತಾ ನಾಯಕ್, ವರ್ಷಾ ನಾಯಕ್ ಮೊದಲಾದವರು ಭಾಗವಹಿಸಿದ್ದರು.
ಗುಂಡೇಟು ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
ಬೈಂದೂರು, ಜೂ.19: ಉಳ್ಳೂರು ಗ್ರಾಮದ ಮೇಕೋಡು ಎಂಬಲ್ಲಿ ಜೂ.17ರಂದು ತಡರಾತ್ರಿ ನಡೆದ ಪ್ರಶಾಂತ್ ಶೆಟ್ಟಿ ಗುಂಡೇಟು ಪ್ರಕರಣದ ನಾಲ್ವರು ಆರೋಪಿಗಳನ್ನು ಇಂದು ಕುಂದಾಪುರ ನ್ಯಾಯಾಧೀಶರ ಮನೆ ಮುಂದೆ ಹಾಜರು ಪಡಿಸಲಾಗಿದ್ದು, ನಾಳೆಯವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತ ಆರೋಪಿಗಳಾದ ಅಂಕಿತ್ ಶೆಟ್ಟಿ, ದೀಪಕ್ ಶೆಟ್ಟಿ, ಪ್ರಾಣೇಶ್ ಶೆಟ್ಟಿ, ಸೀತಾರಾಮ ಶೆಟ್ಟಿ ಯನ್ನು ನಾಳೆ ಮತ್ತೆ ಕುಂದಾಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಸದ್ಯಕ್ಕೆ ಮೃತರ ಅಣ್ಣ ನೀಡಿದ ದೂರಿನಂತೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೈಂದೂರು ಪೊಲೀಸರು ತಿಳಿಸಿದ್ದಾರೆ.
ಅಪಾಯಕಾರಿ ಹೊಂಡ ಮುಚ್ಚಲು ಆಗ್ರಹ
ಉಡುಪಿ, ಜೂ.19: ಉಡುಪಿ ನಗರ ಪೊಲೀಸ್ ಠಾಣೆ ರಸ್ತೆಯ ಕಾವೇರಿ ಹೊಟೇಲಿನ ಬಳಿ ಇರುವ ಅಪಾಯಕಾರಿ ಹೊಂಡವನ್ನು ಮುಚ್ಚುವಂತೆ ಸ್ಥಳೀಯರು ಉಡುಪಿ ನಗರಸಭೆಯನ್ನು ಆಗ್ರಹಿಸಿದ್ದಾರೆ.
ಕೆಲವು ದಿನಗಳ ಹಿಂದೆ ಉಡುಪಿ ನಗರಸಭೆಯವರು ರಸ್ತೆಯಲ್ಲಿರುವ ಚರಂಡಿಯನ್ನು ಸ್ವಚ್ಛತೆ ಮಾಡಿದ್ದು, ಬಳಿಕ ಅದನ್ನು ಮುಚ್ಚದೆ ಹೋಗಿದ್ದಾರೆ. ಹೀಗೆ ಸೃಷ್ಟಿಯಾಗಿರುವ ಬೃಹತ್ ಹೊಂಡಕ್ಕೆ ಕೆಲ ದಿನಗಳ ಹಿಂದೆ ಮಾರುತಿ ಓಮ್ನಿ ಕಾರು ಬಿದ್ದು ಜಖಂಗೊಂಡಿದೆ. ವಿದ್ಯಾರ್ಥಿ ಅಬ್ದುಲ್ ಫೈಝಲ್ ಬಿದ್ದು ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ಆದುದರಿಂದ ಈ ಅಪಾಯಕಾರಿ ಹೊಂಡದಿಂದ ಜೀವ ಹಾನಿ ಸಂಭವಿಸುವ ಮೊದಲು ಉಡುಪಿ ನಗರಸಭೆ ಎಚ್ಚೆತ್ತುಕೊಳ್ಳಬೇಕು. ಕೂಡಲೇ ಈ ಹೊಂಡವನ್ನು ಮುಚ್ಚುವ ಕಾರ್ಯವನ್ನು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಗ್ರಾಪಂ ಅಧ್ಯಕ್ಷರಿಗೆ ಬೆದರಿಕೆ: ದೂರು
ಗಂಗೊಳ್ಳಿ, ಜೂ.19: ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಖಾರ್ವಿಗೆ ಅದೇ ಪಂಚಾಯತ್‌ನ ಸದಸ್ಯ ನಾಗರಾಜ್ ಖಾರ್ವಿ ಬೆದರಿಕೆಯೊಡ್ಡಿರುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.
ರೇಷ್ಮಾ ಖಾರ್ವಿ ಜೂ.18ರಂದು ಮಧ್ಯಾಹ್ನ ವೇಳೆ ಗಂಗೊಳ್ಳಿ ದಾಕು ಹಿತ್ಲು ರಾಮ ಮಂದಿರ ದೇವಸ್ಥಾನದಬಳಿ ಮಳೆ ನೀರು ಹರಿದು ಹೋಗುವ ಯೋಜ ನೆಗೆ ಸಂಬಂಧಿಸಿ ಸ್ಥಳ ಪರಿಶೀ ಲನೆಗೆ ಹೋಗಿದ್ದ ವೇಳೆ ಗ್ರಾಪಂ ಸದಸ್ಯ ನಾಗರಾಜ ಖಾರ್ವಿ ಹಲ್ಲೆಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದ ರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.







