ಬಾಂಗ್ಲಾ: ಉಗ್ರವಾದದ ವಿರುದ್ಧ ಫತ್ವಾ
1 ಲಕ್ಷಕ್ಕೂ ಅಧಿಕ ಇಸ್ಲಾಮ್ ಧರ್ಮಗುರುಗಳ ಸಹಿ
ಢಾಕಾ,ಜೂ.19: ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರು ಹಾಗೂ ಜಾತ್ಯತೀತ ಬರಹಗಾರರ ವಿರುದ್ಧ ಮೂಲಭೂತವಾದಿಗಳು ಬರ್ಬರವಾದ ದಾಳಿಗಳನ್ನು ನಡೆಸುತ್ತಿರುವುದರ ವಿರುದ್ಧ ಅಲ್ಲಿನ 1 ಲಕ್ಷಕ್ಕೂ ಅಧಿಕ ಇಸ್ಲಾಮಿ ವಿದ್ವಾಂಸರು ಹಾಗೂ ಧರ್ಮಗುರುಗಳು ಶನಿವಾರ ಫತ್ವಾ ಹೊರಡಿಸಿದ್ದಾರೆ.
ಢಾಕಾದಲ್ಲಿ ಪ್ರಕಟವಾದ ಈ ಫತ್ವಾಕ್ಕೆ ಇಮಾಮರು ಸೇರಿದಂತೆ ಬಾಂಗ್ಲಾದ ಒಟ್ಟು 1,01,524 ಮುಸ್ಲಿಂ ಧರ್ಮಗುರುಗಳು ಸಹಿ ಹಾಕಿದ್ದಾರೆ. ‘‘ಮಾನವಕುಲದ ಒಳಿತಿಗಾಗಿ ಶಾಂತಿಯ ಶಾಸನ’’ ಎಂಬ ಶೀರ್ಷಿಕೆಯ ಈ ಫತ್ವಾವು, ಅಲ್ಪಸಂಖ್ಯಾತರು ಹಾಗೂ ಜಾತ್ಯತೀತ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಬಲವಾಗಿ ಖಂಡಿಸಿದೆ.
‘‘ಜನರನ್ನು ಕೊಲ್ಲುವುದು ನರಕಕ್ಕೆ ದಾರಿಯೇ ಹೊರತು ಸ್ವರ್ಗಕ್ಕಲ್ಲವೆಂಬುದು ಉಗ್ರರಿಗೆ ಒಮ್ಮೆ ಅರಿವಾದರೆ ಸಾಕು, ಅವರು ಈ ಕೃತ್ಯಕ್ಕೆ ಕೈಹಾಕಲಾರರು’’ ಎಂದು ಬಾಂಗ್ಲಾದೇಶ ಜಮೀಯ್ಯತುಲ್ ಉಲೇಮಾದ ಅಧ್ಯಕ್ಷ ಫರೀದುದ್ದೀನ ಮಸೂದ್ ಫತ್ವಾವನ್ನು ಪ್ರಕಟಿಸಿದ ನಂತರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಈ ಧರ್ಮಾಂಧ ಉಗ್ರರು ಕೇವಲ ಇಸ್ಲಾಮಿನ ಶತ್ರುಗಳು ಮಾತ್ರವಲ್ಲ ಇಡೀ ಮಾನವಕುಲದ ಶತ್ರುಗಳಾಗಿದ್ದಾರೆ’’ ಎಂದು ಮಸೂದ್ ಹೇಳಿರುವುದಾಗಿ ‘ದಿ ಡೈಲಿ ಸ್ಟಾರ್’ ಪತ್ರಿಕೆ ವರದಿ ಮಾಡಿದೆ.
ಬಾಂಗ್ಲಾದಾದ್ಯಂತ ಉಗ್ರರು ಧಾರ್ಮಿಕ ಅಲ್ಪಸಂಖ್ಯಾತರು, ಚಿಂತಕರು ಹಾಗೂ ಜಾತ್ಯತೀತ ಬರಹಗಾರರ ಮೇಲೆ ವ್ಯಾಪಕವಾಗಿ ದಾಳಿಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಫತ್ವಾವನ್ನು ಹೊರಡಿಸಲಾಗಿದೆ. ಉಗ್ರರ ವಿರುದ್ಧ ಕೆಲವು ಫತ್ವಾಗಳನ್ನು ಘೋಷಿಸಲು ಢಾಕಾದಲ್ಲಿ ಸಭೆ ಸೇರಿರುವ 11 ಮಂದಿ ಉಲೇಮಾಗಳ ತಂಡದ ನೇತೃತ್ವವನ್ನು ಮಸೂದ್ ವಹಿಸಿದ್ದಾರೆ.
ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಿಷ್ಣುತೆಗಾಗಿ ಕರೆ ನೀಡಿರುವ ಇಸ್ಲಾಮಿ ಧರ್ಮಗುರುಗಳು, ಭಯೋತ್ಪಾದನೆಯ ವಿರುದ್ಧ ಸರಣಿ ಫತ್ವಾಗಳನ್ನು ಹೊರಡಿಸುವುದಾಗಿ ತಿಳಿಸಿದ್ದಾರೆ. ಕಿಶೋರ್‌ಗಂಜ್‌ನ ಶೋಲಕಿಯಾ ಮಸೀದಿಯ ಪ್ರಧಾನ ಇಮಾಮ್ ಆಗಿರುವ ಮಸೂದ್, ‘ಭಯೋತ್ಪಾದನೆ, ಉಗ್ರವಾದದ ವಿರುದ್ಧ ಮಾನವತೆ ಹಾಗೂ ಶಾಂತಿ ಕುರಿತ ಫತ್ವಾ’ದ ಸಂಚಾಲಕರೂ ಆಗಿದ್ದಾರೆ.







