ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಮೆಂಟ್; ಚಿಲಿ, ಅರ್ಜೆಂಟೀನ ಸೆಮಿಫೈನಲ್‌ಗೆ

ಮಸ್ಸಾಚುಸೆಟ್ಸ್, ಜೂ.19: ಲಿಯೊನೆಲ್ ಮೆಸ್ಸಿ ದಾಖಲಿಸಿದ 54ನೆ ಅಂತಾರಾಷ್ಟ್ರೀಯ ಗೋಲು ನೆರವಿನಲ್ಲಿ ಅರ್ಜೆಂಟೀನ ತಂಡ ಇಲ್ಲಿ ನಡೆಯುತ್ತಿರುವ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ವೆನೆಜುವೆಲಾ ತಂಡವನ್ನು 4-1 ಅಂತರದಲ್ಲಿ ಬಗ್ಗು ಬಡಿದು ಸೆಮಿ ಫೈನಲ್ ಪ್ರವೇಶಿಸಿದೆ.
ಇನ್ನೊಂದು ಪಂದ್ಯದಲ್ಲಿ ಚಿಲಿ ತಂಡ ಮೆಕ್ಸಿಕೊ ವಿರುದ್ಧ 7-0 ಅಂತರದಲ್ಲಿ ಭರ್ಜರಿ ಜಯ ಗಳಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದೆ.
ಜೂನ್ 21ರಂದು ನಡೆಯುವ ಸೆಮಿಫೈನಲ್‌ನಲ್ಲಿ ಅರ್ಜೆಂಟೀನ ತಂಡ ಅಮೆರಿಕವನ್ನು ಎದುರಿಸಲಿದೆ. ಜೂ.22ರಂದು ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಚಿಲಿ ತಂಡ ಕೊಲಂಬಿಯಾವನ್ನು ಎದುರಿಸಲಿದೆ.
ಬಾರ್ಸಿಲೋನಾ ತಂಡದ ಸೂಪರ್ ಸ್ಟಾರ್ ಮೆಸ್ಸಿ 60ನೆ ನಿಮಿಷದಲ್ಲಿ ಗೋಲು ದಾಖಲಿಸಿ ಅರ್ಜೆಂಟೀನದ ಗೇಬ್ರಿಯಲ್ ಬ್ಯಾಟಿಸ್ಟುಟಾ ಅವರ ಹೆಸರಲಿದ್ದ 54 ಗೋಲು ಸಾಧನೆಯ ದಾಖಲೆಯನ್ನು ಸರಿಗಟ್ಟಿದ್ದರು.
ಅರ್ಜೆಂಟೀನ ತಂಡ 23 ವರ್ಷಗಳ ಬಳಿಕ ಮೊದಲ ಬಾರಿ ಕೋಪಾ ಅಮೆರಿಕ ಟ್ರೋಫಿಯನ್ನು ಬಾಚಿಕೊಳ್ಳುವ ಯೋಜನೆಯಲ್ಲಿದೆ. ಅದು ಕಳೆದ ಬಾರಿ ಕೋಪಾ ಅಮೆರಿಕ ಫೈನಲ್ ಮತ್ತು 2014ರ ವಿಶ್ವಕಪ್ ಫೈನಲ್ನ್‌ಲ್ಲಿ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡಿತ್ತು.
ಅರ್ಜೆಂಟೀನ ತಂಡದ ಹಿಗುಯ್ಯನ್ 8ನೆ ನಿಮಿಷದಲ್ಲಿ ಅರ್ಜೆಂಟೀನದ ಗೋಲು ಖಾತೆ ತೆರೆದಿದ್ದರು. 28ನೆ ನಿಮಿಷದಲ್ಲಿ ಅವರು ಎರಡನೆ ಗೋಲು ದಾಖಲಿಸಿದರು. 60ನೆ ನಿಮಿಷದಲ್ಲಿ ಮೆಸ್ಸಿ ಗೋಲು ಬಾರಿಸಿ ತಂಡಕ್ಕೆ 3-0 ಮುನ್ನಡೆ ದೊರಕಿಸಿಕೊಟ್ಟರು. ಆದರೆ 70ನೆ ನಿಮಿಷದಲ್ಲಿ ವೆನೆಝುವೆಲಾ ತಂಡದ ಸಿಲೊಮನ್ ರಾಂಡನ್ ತಂಡದ ಗೋಲು ಖಾತೆ ತೆರೆದರು. ಇದರ ಬೆನ್ನಲ್ಲೆ ಅರ್ಜೆಂಟೀನ ತಂಡದ ಲಾಮೆಲಾ ಗೋಲು ಬಾರಿಸುವುದರೊಂದಿಗೆ ಅರ್ಜೆಂಟೀನ 4-1 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ ತಲುಪಿತು.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಚಿಲಿ ತಂಡ ಮೆಕ್ಸಿಕೊ ವಿರುದ್ಧ 7-0 ಅಂತರದಲ್ಲಿ ಭರ್ಜರಿ ಜಯ ಗಳಿಸಿ ಸೆಮಿಫೈನಲ್ ತಲುಪಿದೆ.





