ಬೆಳ್ತಂಗಡಿ: ಸ್ವಾವಲಂಬನ್ ಆರೋಗ್ಯ ವಿಮಾ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ

ಬೆಳ್ತಂಗಡಿ, ಜೂ.19: ವಿಮಾ ಯೋಜನೆಗೆ ಸೇರ್ಪಡೆಗೊಳ್ಳಲು ವಿಕಲಾಂಗರೇ ಇಲ್ಲಿ ಸೇರಿದ್ದು ವಿಶೇಷವಾಗಿದೆ. ಈ ಕಾರ್ಯಕ್ರಮ ನನಗೆ ಇನ್ನಷ್ಟು ಪ್ರೇರಣೆ ನೀಡಿದೆ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತೆ ಮಾಲತಿ ಹೊಳ್ಳ ಹೇಳಿದರು.
ಅವರು ಉಜಿರೆ ಶಾರದಾ ಮಂಟಪದಲ್ಲಿ ಸೇವಾ ಭಾರತಿ ಕನ್ಯಾಡಿ ಸಹಯೋಗದೊಂದಿಗೆ ಎಂಡೋ ಸಲ್ಫಾನ್ ವಿರೋಧಿ ಸಮಿತಿ ಕೊಕ್ಕಡ, ಬೆಳ್ತಂಗಡಿ ತಾಲೂಕು ಅಂಗವಿಕಲರ ಸಂಘ ಉಜಿರೆ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರದೊಂದಿಗೆ ಸ್ವಾವಲಂಬನ್ ಆರೋಗ್ಯ ವಿಮಾ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ನಾನು ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡುವ ಮಾತೃಛಾಯ ಎಂಬ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇನೆ. ಅಂತಹ ಮಕ್ಕಳಿದ್ದಲ್ಲಿ ನಮ್ಮ ಟ್ರಸ್ಟಿಗೆ ಕಳುಹಿಸಿಕೊಡಿ. ಟ್ರಸ್ಟ್ ಅವರ ಸಂಪೂರ್ಣ ಪಾಲನೆ, ಪೋಷಣೆ ಜವಾಬ್ದಾರಿಯನ್ನು ಹೊರುತ್ತದೆ ಎಂದರು.
ಸೇವಾ ಭಾರತಿ ಕಾರ್ಯದರ್ಶಿ ವಿನಾಯಕ ರಾವ್ ಕನ್ಯಾಡಿ ಪ್ರಸ್ತಾವಿಸಿ, ವಿಮಾ ಪಾಲಿಸಿ ರೂ. 355ರಲ್ಲಿ ಕೇವಲ ರೂ. 100 ಪಾವತಿಸಿದಲ್ಲಿ ಸೇವಾ ಭಾರತಿಯು ಇತರೇ ದಾನಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ರೂ. 255 ರನ್ನು ಭರಿಸಿ ಪಾಲಿಸಿ ಮಾಡಲಾಗುವುದು. ಇದು ಬೆಳ್ತಂಗಡಿ ತಾಲೂಕಿನ ವಿಶೇಷ ಚೇತನರಿಗೆ ವಿಶೇಷ ಸೌಲಭ್ಯವಾಗಿರುತ್ತದೆ. ಇದನ್ನು ದಾನಿಗಳಿಂದ 10 ಯಾ 20 ಪಾಲಿಸಿಯಂತೆ ಅದರ ವೆಚ್ಚ ಭರಿಸಲು ಕೋರಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ ಎಂದರು.
ವಿಮಾ ಕಂಪೆನಿಯ ಸಹಾಯಕ ಪ್ರಬಂಧಕಿ ಪ್ರೇಮಾ ಭಟ್ ಅಂಗವಿಕಲ ವಿಮಾ ಪಾಲಿಸಿಯ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಸೇವಾಭಾರತಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್ ವಹಿಸಿದ್ದರು.
ವಿಮಾ ಸಂಯೋಜಕ ಎಂ.ಆರ್.ನಾಯಕ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ಭಟ್, ಅಂಗವಿಕಲರ ಸಂಘ ಉಜಿರೆ ಇದರ ಅಧ್ಯಕ್ಷೆ ಅಂಜನಾ ದೇವಿ ವೇದಿಕೆಯಲ್ಲಿದ್ದರು. ಸ್ವರ್ಣಗೌರಿ ಸ್ವಾಗತಿಸಿದರು. ಎಂಡೋಸಲ್ಫಾನ್ ಹೋರಾಟ ಸಮಿತಿ ಕೊಕ್ಕಡ ಅಧ್ಯಕ್ಷ ಶ್ರೀಧರ ಗೌಡ ಕೆ. ವಂದಿಸಿದರು. ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಿದ್ದು, ಮಾಹಿತಿ ಪಡೆದುಕೊಂಡು ವಿಮಾ ಸೌಲಭ್ಯಕ್ಕೊಳಪಟ್ಟರು.







