ಅರ್ಕುಳ ಅಪಘಾತದಲ್ಲಿ ಗಾಯಗೊಂಡಿದ್ದ ಇನ್ನೋರ್ವ ಗಾಯಾಳು ಮೃತ್ಯು
ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ

ವಿಟ್ಲ, ಜೂ.20: ಫರಂಗಿಪೇಟೆ ಸಮೀಪದ ಅರ್ಕುಳ ಯಶಸ್ವಿ ಹಾಲ್ ಬಳಿ ಜೂ.10 ರಂದು ಕಂಟೈನರ್‌ವೊಂದು ರಿಕ್ಷಾ ಹಾಗೂ ಮಾರುತಿ ಓಮ್ನಿ ಕಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ರವಿವಾರ ಸಂಜೆ ಮೃತಪಟ್ಟಿದ್ದಾರೆ.
ಮೃತ ಯುವಕನನ್ನು ಸಜಿಪಮುನ್ನೂರು ಗ್ರಾಮದ ನಂದಾವರ ನಿವಾಸಿ ಅಬ್ದುಲ್ ಖಾದರ್ ಹಾಗೂ ಮುಮ್ತಾಝ್ ದಂಪತಿಯ ಪುತ್ರ ಝಮೀರ್ (19) ಎಂದು ಗುರುತಿಸಲಾಗಿದೆ.
ಜೂ.10ರಂದು ಅರ್ಕುಳ ಎಂಬಲ್ಲಿ ಬೃಹತ್ ಗಾತ್ರದ ಕಂಟೈನರ್‌ವೊಂದು ಹೆದ್ದಾರಿ ವಿಭಜಕ ದಾಟಿ ರಸ್ತೆಯ ಇನ್ನೊಂದು ಬದಿಗೆ ಎರಗಿದ ಪರಿಣಾಮ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಮಾರುತಿ ಕಾರು ಹಾಗೂ ಆಟೊ ರಿಕ್ಷಾಕ್ಕೆ ಅಪ್ಪಳಿಸಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬಂಟ್ವಾಳ ತಾಲೂಕಿನ ಸಜಿಪಮುನ್ನೂರು ಗ್ರಾಮದ ನಂದಾವರ ನಿವಾಸಿಗಳಾದ ಯೂಸುಫ್ ಎಂಬವರ ಪುತ್ರ ಮುಹಮ್ಮದ್ ನಝೀರ್ (29), ಸಿದ್ದೀಕ್ ಎಂಬವರ ಪುತ್ರ ಸಲಾಂ (22), ಮಾರಿಪಳ್ಳ ನಿವಾಸಿ ಹಮೀದ್ ಎಂಬವರ ಪುತ್ರ ಪ್ರಥಮ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ಸಿನಾನ್ (16), ಮಾರುತಿ 800 ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಟ್ಲ ನಿವಾಸಿ ಅಬ್ಬಾಸ್ (40) ಹಾಗೂ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಅಡ್ಯಾರ್ ಸಮೀಪದ ಬಿರ್ಪುಗುಡ್ಡೆ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಉನೈಸ್ (20) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಉಳಿದಂತೆ ತೌಫೀಕ್, ಶೌಕತ್ ಅಲಿ ಹಾಗೂ ಝಮೀರ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಝಮೀರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಘಟನೆಯಲ್ಲಿ ಒಟ್ಟು ಮೃತರ ಸಂಖ್ಯೆ ಆರಕ್ಕೇರಿದಂತಾಗಿದೆ.
ಮೃತ ಝಮೀರ್ ಊರಿನಲ್ಲಿ ಪೈಂಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ, ಬಳಿಕ ಬೆಂಗಳೂರಿಗೆ ತೆರಳಿ ಹೈಪರ್ ಮಾರ್ಕೆಟ್‌ನಲ್ಲಿ ಉದ್ಯೋಗದಲ್ಲಿದ್ದ. ಇತ್ತೀಚೆಗಷ್ಟೆ ಈತ ಊರಿಗೆ ಬಂದಿದ್ದು, ಕಳೆದ ಜೂನ್ 10 ರಂದು ಶುಕ್ರವಾರ ಸಂಜೆ ಮಿತ್ರರೊಂದಿಗೆ ಸೇರಿಕೊಂಡು ಯಾವುದೋ ಕಾರಣ ನಿಮಿತ್ತ ರಿಕ್ಷಾದಲ್ಲಿ ಮಂಗಳೂರಿಗೆ ತೆರಳಿ ಕೆಲಸ ಮುಗಿಸಿ ಮರಳಿ ಇಫ್ತಾರ್‌ಗೆ ಮನೆಗೆ ಕಡೆ ಹೊರಟಿದ್ದ ವೇಳೆ ಈ ಅವಘಡ ಸಂಭವಿಸಿತ್ತು.







