ಜಾರ್ಖಂಡ್ ಮಹಿಳೆಗೆ ರಕ್ತದಾನ ಮಾಡಿ ಆಪದ್ಬಾಂಧವನಾದ ರಮಝಾನ್ ಉಪವಾಸಿಗ ಜಾವೇದ್

ರಾಂಚಿ, ಜೂ.20: ಬಲಪಂಥೀಯ ಹಿಂದೂ ಉಗ್ರರು 12 ವರ್ಷದ ಬಾಲಕ ಸೇರಿ ಇಬ್ಬರು ಮುಸ್ಲಿಂ ಜಾನುವಾರು ವ್ಯಾಪಾರಿಗಳನ್ನು ಹತ್ಯೆ ಮಾಡಿ ಮರಕ್ಕೆ ತೂಗುಹಾಕಿದ ಘಟನೆಯಿಂದ ದೇಶಾದ್ಯಂತ ಸುದ್ದಿಯಾಗಿದ್ದ ಜಾರ್ಖಂಡ್ ಇದೀಗ ತದ್ವಿರುದ್ಧ ಕಾರಣಕ್ಕೆ ಅಂದರೆ ಅಪೂರ್ವ ಮಾನವೀಯತೆ ಮೆರೆದ ಪ್ರಕರಣವೊಂದಕ್ಕೆ ಸುದ್ದಿಯಾಗಿದೆ.
ಮುಸ್ಲಿಂ ಹತ್ಯೆ ನಡೆದ ಬಲೂಮತ್ ಪ್ರದೇಶದ ಮುಸ್ಲಿಂ ಯುವಕನೊಬ್ಬ ಅಪೂರ್ವ ಮಾನವೀಯತೆ ಮೆರೆದ ನಿದರ್ಶನ ಇದು. ಹಿಂದೂ ಮಹಿಳೆ ರಾಂಪತಿದೇವಿಗೆ ತುರ್ತಾಗಿ ರಕ್ತದ ಆವಶ್ಯಕತೆ ಇತ್ತು. ತಕ್ಷಣ ರಕ್ತಕ್ಕೆ ವ್ಯವಸ್ಥೆ ಮಾಡುವಂತೆ ವೈದ್ಯರು, ಆಕೆಯ ಮಗ ನಾರಾಯಣ ಪ್ರಜಾಪತಿಗೆ ಸೂಚಿಸಿದರು. ತಾಯಿಯ ರಕ್ತದ ಗುಂಪಿಗೆ ಹೊಂದುವ ರಕ್ತ ವ್ಯವಸ್ಥೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿದ್ದ ಯುವಕ ರಕ್ತ ಪಡೆಯಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಕೊನೆಗೆ ಆತನ ನೆರವಿಗೆ ಬಂದಿದ್ದು, ಬಲೂಮತ್‌ನ ನೆರೆಯವರಾದ ಜಾವೇರ್ ಅಖ್ತರ್. ರಮಝಾನ್ ಉಪವಾಸದಲ್ಲಿದ್ದರೂ, 150 ಕಿಲೋಮೀಟರ್ ಪ್ರಯಾಣಿಸಿ, ರಕ್ತದಾನ ಮಾಡಿದ ಅಖ್ತರ್, ರಾಂಪತಿದೇವಿಯ ಜೀವರಕ್ಷಿಸುವಲ್ಲಿ ಯಶಸ್ವಿಯಾದರು.
ಉಪವಾಸದ ವೇಳೆ ರಕ್ತದಾನ ಮಾಡುವುದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂಬ ವೈದ್ಯರ ಎಚ್ಚರಿಕೆಯನ್ನೂ ಲೆಕ್ಕಿಸದೇ, ರಕ್ತ ನೀಡುವ ಮೂಲಕ ಅಖ್ತರ್ ಮಾನವೀಯತೆ ಮೆರೆದರು. ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಅಖ್ತರ್ ಉಪವಾಸ ಇರುವ ಕಾರಣಕ್ಕೆ ರಕ್ತ ಪಡೆಯಲು ವೈದ್ಯರು ನಿರಾಕರಿಸಿದರು. ಆದರೆ ಒಂದೂವರೆ ಗಂಟೆ ಕಾಲ ಅಲ್ಲಾಡದೇ ರಕ್ತದಾನ ಮಾಡಿದರು. ಆ ವೇಳೆಗೆ ಇಫ್ತಾರ್ ಸಮಯವಾಯಿತು. ಉಪವಾಸ ಮುರಿದು, ಆಸ್ಪತ್ರೆ ಬೆಡ್‌ನಲ್ಲೇ ನಿದ್ದೆ ಹೋದರು ಎಂದು ನಾರಾಯಣ್ ನೆನಪಿಸಿಕೊಳ್ಳುತ್ತಾರೆ. ಬಹುಶಃ ನನ್ನ ಉಪವಾಸ ಅಲ್ಹಾಹ್‌ನಿಗೆ ಖುಷಿಯಾಗಿದೆ ಎನಿಸುತ್ತದೆ. ಅಗತ್ಯ ಬಿದ್ದರೆ ನಾನು ಮತ್ತೆ ರಕ್ತ ನೀಡುತ್ತೇನೆ ಎಂದು ಅಖ್ತರ್ ಹೇಳುತ್ತಾರೆ.
ಕೆಲ ತಿಂಗಳ ಮೊದಲು ಅಜ್ಮೀರ್ ಶರೀಫ್‌ಗೆ ಹೋಗುತ್ತಿದ್ದಾಗ, ದಾರಿಮಧ್ಯದಲ್ಲಿ ಹಿಂದೂ ಸ್ನೇಹಿತನೊಬ್ಬ, ಕೋಟಾದಲ್ಲಿ ತನ್ನ ಮಗ ಡೆಂಗ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವುದನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಯಾತ್ರೆ ಕೈಬಿಟ್ಟು, ಕೋಟಾಗೆ ತೆರಳಿ, ಆಂಬುಲೆನ್ಸ್‌ನಲ್ಲಿ ದೆಹಲಿಗೆ ತೆರಳಿ ಆತನ ಜೀವ ಉಳಿಸಿದ ಘಟನೆಯನ್ನೂ ಅಖ್ತರ್ ನೆನಪಿಸಿಕೊಂಡರು. ಈತನನ್ನು ಸಂದರ್ಶಿಸಿದ ಬಿಬಿಪಿ, ದಾದ್ರಿ, ಬಲೂಮತ್, ಮುಝಪ್ಫರ್‌ನಗರ ಘಟನೆಗಳ ಬಗ್ಗೆ ಪ್ರಶ್ನಿಸಿದಾಗ, ಈ ಅಮಾನವೀಯ ಘಟನೆಗಳು ಕೂಡಾ ನನ್ನ ನಂಬಿಕೆಯನ್ನು ಬದಲಿಸಲಾರವು ಎಂದು ಉತ್ತರ ನೀಡಿದ್ದಾರೆ.







