ಅಂಬರೀಶ್ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಿ ಕನ್ನಡಿಗರಿಗೆ ಉಪಕಾರ ಮಾಡಿ

ರೆಬೆಲ್ ಸ್ಟಾರ್ ಅಂಬರೀಶ್ ಕೊನೆಗೂ ರೆಬೆಲ್ ಆಗುವ ಮೂಲಕವೇ ರಾಜ್ಯದ ಜನತೆಗೆ ಬಹುದೊಡ್ಡ ಉಪಕಾರ ಮಾಡಿದ್ದಾರೆ. ಸಂಸದನಾಗಿ, ಕೇಂದ್ರ ಸಚಿವನಾಗಿ ( ಹೌದು, ಅವರು ಕೇಂದ್ರ ಸಚಿವರೂ ಆಗಿದ್ದರು) , ಶಾಸಕನಾಗಿ , ವಸತಿ ಸಚಿವನಾಗಿ ಅಂಬರೀಶ್ ಈ ರಾಜ್ಯಕ್ಕೆ ನೀಡಿರುವ ಮಹತ್ವದ ಕೊಡುಗೆ ಎಂದರೆ ಸೋಮವಾರ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ.
ಇಂತಹ ಸಚಿವರೂ ಇರುತ್ತಾರಾ... ಹೇಗಪ್ಪಾ ಇವರಿಂದ ಕಳಚಿಕೊಳ್ಳೋದು ಎಂದು ಜನರು ಕಳೆದ ಮೂರು ವರ್ಷಗಳಿಂದ ಅನುಭವಿಸುತ್ತಿದ್ದ ಸಂಕಟವನ್ನು ಕೊನೆಗೂ ಅವರು ಎಂದಿನಂತೆ ವಿಶಾಲ ಮನಸ್ಸು ಮಾಡಿ ಅರ್ಥ ಮಾಡಿಕೊಂಡು ಸ್ಪಂದಿಸಿದ್ದಾರೆ ( ಜನಪ್ರತಿನಿಧಿಯಾಗಿ ಅವರು ಜನರ ಸಮಸ್ಯೆಗೆ ಸ್ಪಂದಿಸಿದ್ದು ಬಹುಶ: ಇದೇ ಮೊದಲು !) . ಇದಕ್ಕಾಗಿ ಅವರನ್ನು ಇಡೀ ಕನ್ನಡ ಕುಲಕೋಟಿ ಅಭಿನಂದಿಸಬೇಕು. ಎಲ್ಲೆಡೆ ನಿಂತು ಅವರ ಭೊಪರಾಕ್ ಹೇಳಬೇಕು. ಹಾಗು ಆದಷ್ಟು ಬೇಗ ಅವರ ರಾಜೀನಾಮೆ ಸ್ವೀಕೃತವಾಗಿ ಅವರು ಮಾಜಿಯಾಗಿ ಮನೆ ಸೇರಲಿ ಎಂದು ಎಲ್ಲ ದೇವರ ಬಳಿ ಜಾತಿ ಮತ ಭೇದ ಮರೆತು ಪ್ರಾರ್ಥಿಸಬೇಕು.
ನಟನಾಗಿ, ಕಲಾವಿದನಾಗಿ ಅಂಬರೀಶ್ ಎಷ್ಟು ದೊಡ್ಡ ಪ್ರತಿಭೆ ಎಂಬ ಬಗ್ಗೆ ಇಲ್ಲಿ ಚರ್ಚೆಗೆ ಹೋಗುತ್ತಿಲ್ಲ. ಅದಿಲ್ಲಿ ಅಗತ್ಯವೂ ಇಲ್ಲ. ಅವರ ಸಿನಿಮಾ, ಅವರ ಲಕ್ಷಾಂತರ ಅಭಿಮಾನಿಗಳು ಯಾವುವೂ ಇಲ್ಲಿ ಚರ್ಚೆಯ ವಿಷಯವೇ ಅಲ್ಲ. ಇಲ್ಲಿ ನಾವು ತಿಳಿದುಕೊಳ್ಳ ಬೇಕಾದ್ದು ಒಬ್ಬ ಜನಪ್ರತಿನಿಧಿಯಾಗಿ ಅಂಬರೀಶ್ ಎಷ್ಟು ದೊಡ್ಡ ಫೆಲ್ಯೂರ್ ಎಂಬುದನ್ನು. ಶಾಸಕ, ಸಚಿವನೊಬ್ಬ ಹೇಗಿರಬಾರದು ಎಂಬುದಕ್ಕೆ ಅಂಬರೀಶ್ ಅತ್ಯುತ್ತಮ ನಿದರ್ಶನವಾಗಿದ್ದರು.
ಸಚಿವರಾಗಿ ಸಿಂಗಾಪುರದಲ್ಲಿ ರಾಜ್ಯದ ಖರ್ಚಲ್ಲಿ ಚಿಕಿತ್ಸೆ ಮಾಡಿಸಿಕೊಂಡಿದ್ದನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಅಂಬರೀಶ್ ಈ ರಾಜ್ಯದ ಪಾಲಿಗೆ, ಸರ್ಕಾರದ ಪಾಲಿಗೆ ಹೊರೆಯಾಗಿದ್ದರು. ಅವರೊಬ್ಬ ಬಿಗ್ ಲಯಾಬಿಲಿಟಿ ! ಜನರ ಕೈಗೆ ಸಿಗದ , ತನ್ನ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸದ, ಕನಿಷ್ಟ ಅದಕ್ಕೆ ತೋರಿಕೆಯ ಗಮನವನ್ನೂ ಕೊಡದ ಸಚಿವನೊಬ್ಬ ಯಾಕಾದರೂ ಜನರ ತೆರಿಗೆಯ ದುಡ್ಡು ಖರ್ಚು ಮಾಡಿ ಅಧಿಕಾರದಲ್ಲಿರಬೇಕು ?
ಅಂಬರೀಶ್ ಅವರನ್ನು ಈಗಲಾದರೂ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಕಾಂಗ್ರೆಸ್ ವರಿಷ್ಠರಿಗೆ , ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ರಾಜ್ಯದ ಜನತೆ ಕೃತಜ್ಞರು. ಯಾವುದೇ ಕಾರಣಕ್ಕೂ ಅವರ ಮನವೊಲಿಸಿ ರಾಜೀನಾಮೆ ಹಿಂದೆ ಪಡೆಯುವಂತೆ ಮಾಡಲೇಬಾರದು. ಅವರು ಮನೆಗೆ ಹೋಗಬೇಕು.







