ಮಸ್ಜಿದುನ್ನಬವಿಯಲ್ಲಿ ತರಾವೀಹ್ ಪ್ರಾರ್ಥನೆಗೆ ಕಾಶ್ಮೀರ ಮೂಲದ ವಿದ್ವಾಂಸ ಶೇಖ್ ಮುಹಮ್ಮದ್ ನೇತೃತ್ವ

ಶ್ರೀನಗರ, ಜೂ.20: ಕಾಶ್ಮೀರದಲ್ಲಿ ಜನಿಸಿದ ವಿದ್ವಾಂಸ ಖಾರಿ ಶೇಖ್ ಮುಹಮ್ಮದ್ ಬಿನ್ ಖಲೀಲ್ ಈ ವರ್ಷ ಮಸ್ಜಿದುನ್ನಬವಿಯಲ್ಲಿ ಪವಿತ್ರ ರಂಝಾನ್‌ನ ತರಾವೀಹ್ ಪ್ರಾರ್ಥನೆಗೆ ಇಮಾಮ್ ಆಗಿ ನೇತೃತ್ವ ವಹಿಸಿದ್ದಾರೆ.
ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಅವರು ಶೇಖ್ ಮುಹಮ್ಮದ್ ಬಿನ್ ಖಲೀಲ್ ಅವರನ್ನು ಜೂನ್ ತಿಂಗಳ ಆರಂಭದಲ್ಲಿ ಮಸ್ಜಿದುನ್ನಬವಿಯಲ್ಲಿ ತರಾವೀಹ್ ಪ್ರಾರ್ಥನೆಗೆ ಇಮಾಮ್ ಆಗಿ ನೇಮಕಗೊಳಿಸಿ ಆದೇಶ ನೀಡಿದ್ದರು.
ಕಳೆದ ಎರಡು ವಾರಗಳಿಂದ ಶೇಖ್ ಮುಹಮ್ಮದ್ ಬಿನ್ ಖಲೀಲ್ ಅವರು ಮಸ್ಜಿದುನ್ನಬವಿಯಲ್ಲಿ ಇಮಾಮ್ ಆಗಿ ಕಾರ್ಯ ನಿರ್ವವಹಿಸುತ್ತಿದ್ದಾರೆ. ಅವರು ಮದೀನದ ಮಸ್ಜಿದ್ -ಎ-ಖುಬಾದ ಖಾಯಂ ಇಮಾಂ ಆಗಿದ್ದಾರೆ.
ಶೇಖ್ ಮುಹಮ್ಮದ್ ಬಿನ್ ಖಲೀಲ್ ಅವರು ಖಾರಿ ಖಲೀಲ್ ಅವರ ಪುತ್ರ. ಖಲೀಲುರ‍್ರಹ್ಮಾನ್ ಅವರು ಓರ್ವ ಫ್ರಖ್ಯಾತ ಕುರ್ ಆನ್ ಅಧ್ಯಾಪಕರಾಗಿದ್ದಾರೆ. ಶೇಖ್ ಮುಹಮ್ಮದ್ ಅಯೂಬ್ ಸೇರಿದಂತೆ ಹಲವು ಮಂದಿ ಶಿಷ್ಯರನ್ನು ಅವರು ಹೊಂದಿದ್ದಾರೆ.
ಶೇಖ್ ಮುಹಮ್ಮದ್ ಅವರು1940ರಲ್ಲಿ ಪಾಕಿಸ್ತಾನದ ಆಡಳಿತಕ್ಕೊಳಪಟ್ಟ ಕಾಶ್ಮೀರದ ಮುಝಫಾರ್‌ಬಾದ್ ಜನಿಸಿದರು. ಇವರು ಲಾಹೋರ್‌ನಲ್ಲಿ ಶೇಖ್ ಸುಲೈಮನ್ ಅವರಿಂದ ಆರಂಭದಲ್ಲಿ ಶಿಕ್ಷಣ ಪಡೆದಿದ್ದರು.
1943ರಲ್ಲಿ ಅವರ ಕುಟುಂಬ ಸೌದಿ ಅರೇಬಿಯಾಕ್ಕೆ ವಲಸೆ ಹೋಗಿತ್ತು. ಮಸ್ಜಿದುಲ್ ಹರಾಂನಲ್ಲಿ ಶೇಖ್ ಮುಹಮ್ಮದ್ ಸ್ವಲ್ಪ ಸಮಯ ಬೋಧನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಅವರು ಮದೀನದ ಮಸ್ಜಿದ್ -ಎ-ಖುಬಾದ ಖಾಯಂ ಇಮಾಂ ಆಗಿ ನೇಮಕಗೊಂಡರು.
ಶೇಖ್ ಮುಹಮ್ಮದ್ ಸಹೋದರ ಖಾರಿ ಮುಹಮ್ಮದ್ ಅವರು ಮಸ್ಜಿದ್ ಖಿಬ್ಲತೈನ್‌ನ ಇಮಾಮ್ ಆಗಿದ್ದರು. ಅವರು ದಕ್ಷಿಣ ಆಫ್ರಿಕ ಪ್ರವಾಸ ಕೈಗೊಳ್ಳುವ ಮೊದಲು ಇಲ್ಲಿನ ಇಮಾಮ್ ಆಗಿ ಸೇವೆ ಸಲ್ಲಿಸಿದ್ದರು.
ಶೇಖ್ ಮುಹಮ್ಮದ್ ಅವರು ಸುಮಧುರ ಕಂಠ ಸಿರಿಗೆ ಹೆಸರಾಗಿದ್ದಾರೆ. ಅವರು ಪ್ರಸ್ತುತ ಮದೀನದಲ್ಲಿ ನೆಲೆಸಿದ್ದಾರೆ.





