ಬರಿಂದರ್-ಬುಮ್ರಾ ದಾಳಿಗೆ ಬಸವಳಿದ ಝಿಂಬಾಬ್ವೆ ; ಭಾರತಕ್ಕೆ ಭರ್ಜರಿ ಜಯ
ಎರಡನೆ ಟ್ವೆಂಟಿ-20 ಪಂದ್ಯ; ಸರಣಿ 1-1 ಸಮಬಲ

ಹರಾರೆ, ಜೂ.20: ಝಿಂಬಾಬ್ವೆ ವಿರುದ್ಧದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 100 ರನ್‌ಗಳ ಸವಾಲನ್ನು ಪಡೆದ ಭಾರತ ಇನ್ನೂ 41 ಎಸೆತಗಳನ್ನು ಬಾಕಿ ಉಳಿಸಿ ವಿಕೆಟ್ ನಷ್ಟವಿಲ್ಲದೆ 103 ರನ್ ಗಳಿಸುವ ಮೂಲಕ ಸುಲಭದ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಕಳೆದ ಪಂದ್ಯದಲ್ಲಿ ಝಿಂಬಾಬ್ವೆ ಎರಡು ರನ್‌ಗಳ ರೋಚಕ ಜಯ ದಾಖಲಿಸಿತ್ತು.
ಆರಂಭಿಕ ದಾಂಡಿಗರಾದ ಕೆ.ಎಲ್.ರಾಹುಲ್ ಔಟಾಗದೆ 47 ರನ್ (40ಎ, 2ಬೌ,2ಸಿ) ಮತ್ತು ಮನ್‌ದೀಪ್ ಸಿಂಗ್ ಔಟಾಗದೆ 52 ರನ್(40ಎ, 5ಬೌ,1ಸಿ) ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಝಿಂಬಾಬ್ವೆ ತಂಡ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತದ ಸವಾಲನ್ನು ಸೇರಿಸಿದಂತೆ ಈ ಪಂದ್ಯದಲ್ಲೂ ಸೇರಿಸುವ ಉದ್ದೇಶಕ್ಕಾಗಿ ಬ್ಯಾಟಿಂಗ್ ಆಯ್ದುಕೊಂಡಿತ್ತು.
ಚೊಚ್ಚಲ ಪಂದ್ಯವನ್ನಾಡಿದ ಬರಿಂದರ್ ಸ್ರಾನ್(10ಕ್ಕೆ 4) ಮತ್ತು ಜಸ್‌ಪ್ರೀತ್ ಬುಮ್ರಾ(11ಕ್ಕೆ 3) ಝಿಂಬಾಬ್ವೆ ತಂಡದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಒಂದು ಹಂತದಲ್ಲಿ 57ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಝಿಂಬಾಬ್ವೆ 90 ರನ್‌ಗಳ ಗಡಿ ದಾಟುವುದು ಸಂಶಯ ಇತ್ತು. ಚಿಭಾಭಾ 10ರನ್, ಮಸಕಝಾ 10ರನ್, ಮೂರ್ 31 ರನ್, ವಾಲೆರ್ 14 ರನ್ ಮತ್ತು ಟ್ರಿಪಾನೊ ಔಟಾಗದೆ 11 ರನ್ ಗಳಿಸಿದರು. ಉಳಿದಂತೆ ತಂಡದ ಸಹ ಆಟಗಾರರಿಂದ ಎರಡಂಕೆಯ ಸ್ಕೋರ್ ದಾಖಲಾಗಲಿಲ್ಲ.
ಎಡಗೈ ವೇಗಿ ಬರಿಂದರ್ ಸ್ರಾನ್ 4 ವಿಕೆಟ್ ಉಡಾಯಿಸುವ ಮೂಲಕ ಚೊಚ್ಚಲ ಪ್ರವೇಶದಲ್ಲೇ ಉತ್ತಮ ಸಾಧನೆ ಮಾಡಿರುವ ಎರಡನೆ ಬೌಲರ್ ಎನಿಸಿಕೊಂಡರು. ಇವರೊಂದಿಗೆ ಮೊದಲ ಪಂದ್ಯವನ್ನಾಡಿದ ಧವಳ್ ಕುಲಕರ್ಣಿ 32ಕ್ಕೆ 1 ವಿಕೆಟ್ ಪಡೆದರು. ಯಜುವೇಂದ್ರ ಚಾಹಲ್ 19ಕ್ಕೆ 1 ವಿಕೆಟ್ ಪಡೆದರು. ಬುಮ್ರಾ ಅವರು ಸ್ರಾನ್‌ಗೆ ಉತ್ತಮ ಬೆಂಬಲ ನೀಡಿದರು.
ತಂಡದ ಸ್ಕೋರ್ 2.5 ಓವರ್‌ಗಳಲ್ಲಿ 14 ಆಗಿದ್ದಾಗ ಸ್ರಾನ್ ಅವರು ಆರಂಭಿಕ ದಾಂಡಿಗ ಚಿಭಾಬಾ ವಿಕೆಟ್ ಉಡಾಯಿಸುವ ಮೂಲಕ ಚೊಚ್ಚಲ ಟ್ವೆಂಟ-20 ಅಂತಾರಾಷ್ಟ್ರೀಯ ವಿಕೆಟ್ ಪಡೆದರು.
5ನೆ ಓವರ್‌ನಲ್ಲಿ ಮೂವರಿಗೆ ಸ್ರಾನ್ ಪೆವಿಲಿಯನ್ ಹಾದಿ ತೋರಿಸಿದರು. ಆದರೆ ಅವರಿಗೆ ಹ್ಯಾಟ್ರಿಕ್ ಅವಕಾಶ ತಪ್ಪಿತು.
5 ಓವರ್‌ಗಳಲ್ಲಿ ಝಿಂಬಾಬ್ವೆ 4 ವಿಕೆಟ್ ನಷ್ಟದಲ್ಲಿ 28ರನ್ ಗಳಿಸಿತ್ತು. ಬಳಿಕ ಚಾಹಲ್, ಬುಮ್ರಾ ಮತ್ತು ಧವಳ್ ಕುಲಕರ್ಣಿ ದಾಳಿ ಮುಂದುವರಿಸಿ ಝಿಂಬಾಬ್ವೆಗೆ 100 ರನ್ ದಾಖಲಿಸುವ ಮೊದಲೇ ಆಲೌಟ್ ಮಾಡಿದರು. ಚೊಚ್ಚಲ ಪಂದ್ಯವನ್ನಾಡಿದ ಸ್ರಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ವಿವರ
ಝಿಂಬಾಬ್ವೆ: 20 ಓವರ್‌ಗಳಲ್ಲಿ 99/9
ಚಿಭಾಭಾ ಸಿ ರಾಯುಡು ಬಿ ಸ್ರಾನ್ 10
ಮಸಕಝ ಬಿ ಸ್ರಾನ್ 10
ಮೂರ್ ಸಿ ಪಟೇಲ್ ಬಿ ಬುಮ್ರಾ 31
ಸಿಕಂದರ್ ರಝಾ ಸಿ ರಾಹುಲ್ ಬಿ ಸ್ರಾನ್ 01
ಮುತೊಂಬೊಝಿ ಎಲ್‌ಬಿಡಬ್ಲು ಸ್ರಾನ್ 00
ವಾಲ್ಲರ್ ಸಿ ಪಟೇಲ್ ಬಿ ಚಾಹಲ್ 14
ಚಿಗುಂಬುರ ಬಿ ಬುಮ್ರಾ 08
ಕ್ರಿಮರ್ ಸಿ ರಾಯುಡು ಬಿ ಕುಲಕರ್ಣಿ 04
ಮಡ್ಜಿವಾ ಬಿ ಬುಮ್ರಾ 01
ತಿರಿಪಾನೊ ಔಟಾಗದೆ 11
ಇತರ 09
ವಿಕೆಟ್ ಪತನ: 1-14, 2-26, 3-28, 4-28, 5-57, 6-75, 7-81, 8-83, 9-91.
ಬೌಲಿಂಗ್ ವಿವರ:
ಸ್ರಾನ್ 4-0-10-4
ಧವಳ್ ಕುಲಕರ್ಣಿ 4-0-32-1
ಅಕ್ಷರ್ ಪಟೇಲ್ 4-0-23-0
ವೈ.ಚಾಹಲ್ 4-1-19-1
ಬುಮ್ರಾ 4-0-11-3
ಭಾರತ: 13.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 103
ಕೆಎಲ್ ರಾಹುಲ್ ಔಟಾಗದೆ 47
ಮನ್‌ದೀಪ್ ಸಿಂಗ್ ಔಟಾಗದೆ 52
ಇತರ 04
ಬೌಲಿಂಗ್ ವಿವರ:
ತಿರಿಪಾನೊ 3-0-11-0
ಮಡ್ಝಿವಾ 2.1-0-19-0
ಮುಝರಬನಿ 2-0-17-0
ಕ್ರಿಮರ್ 3-0-24-0
ಚಿಭಾಭಾ 2-0-23-0
ಸಿಕಂದರ್ ರಝಾ 1-0-9-0
ಪಂದ್ಯಶ್ರೇಷ್ಠ: ಬರಿಂದರ್ ಸ್ರಾನ್.







