ಬಿಜೆಪಿ ' ಹಿಂದೂ ವಲಸೆ' ಪಟ್ಟಿಯಲ್ಲಿ ತನ್ನ ಕುಟುಂಬದ ಹೆಸರು ಹಾಕಿದ್ದಕ್ಕೆ ಪೊಲೀಸರಿಗೆ ದೂರು ನೀಡಿದ ಹಿಂದೂ ಉದ್ಯಮಿ

ಹುಕುಂ ಸಿಂಗ್
ಹೊಸದಿಲ್ಲಿ, ಜೂ.20: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನ ಹಾಗು ಕಂಧ್ಲಗಳಿಂದ ಮುಸ್ಲಿಮರ ಬೆದರಿಕೆಯಿಂದ ಹಿಂದೂಗಳು ಗುಳೇ ಹೋಗುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ಹುಕುಂ ಸಿಂಗ್ ನೀಡಿದ್ದ ಪಟ್ಟಿಯ ಎಡವಟ್ಟುಗಳು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.
ಪಟ್ಟಿಯಲ್ಲಿ ತನ್ನ ಹೆಸರನ್ನು ನೋಡಿ ಸಿಟ್ಟಾಗಿರುವ ಉದ್ಯಮಿ ಗೌರವ್ ಜೈನ್ , ತನ್ನನ್ನು ವಿನಾಕಾರಣ ಈ ವಿವಾದಕ್ಕೆ ಎಳೆದು ತಂದಿರುವುದರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಹುಕುಂ ಸಿಂಗ್ ನೀಡಿದ 300 ಮಂದಿಯ ಹೆಸರಿದ್ದ ಮೊದಲ ಪಟ್ಟಿ ಸಂಪೂರ್ಣ ತಪ್ಪು ಹಾಗು ಸುಳ್ಳು ಎಂದು ಮಾಧ್ಯಮಗಳು ಹಾಗು ಪೊಲೀಸರು ಸಾಕ್ಷ್ಯ ಸಮೇತ ಸಾಬೀತು ಪಡಿಸಿದ ಮೇಲೆ ತಿಪ್ಪರಲಾಗ ಹೊಡೆದಿದ್ದ ಬಿಜೆಪಿ ಸಂಸದ ಅದು ಕೋಮು ಸಮಸ್ಯೆ ಅಲ್ಲ , ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಎಂದು ರಾಗ ಬದಲಿಸಿದ್ದರು. ಅ ಬಳಿಕ ಬಿಜೆಪಿ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ ಗೌರವ್ ಜೈನ್ ಅವರ ತಂದೆ ಪರಸ್ ಚಂದ್ ಅವರ ಹೆಸರಿತ್ತು.
" ತನ್ನ ಮನೆಯ ಮೇಲೆ ಅಪರಿಚಿತರು " ಮಾರಾಟಕ್ಕಿದೆ" ಎಂದು ಬರೆದು ಬಳಿಕ ಅದನ್ನೇ ಮಾಧ್ಯಮಗಳಲ್ಲಿ ತೋರಿಸಿ ತಮ್ಮ " ಹಿಂದೂ ವಲಸೆ" ವಾದಕ್ಕೆ ಸಾಕ್ಷ್ಯವಾಗಿ ತೋರಿಸುತ್ತಿದ್ದಾರೆ. ನಾನು 2010 ರಲ್ಲಿ ನನ್ನ ವೃತ್ತಿಗಾಗಿ ಇಲ್ಲಿಂದ ಹೋಗಿದ್ದೆ. ಬಳಿಕ ನನ್ನ ಪೋಷಕರು , ಪತ್ನಿ ಹಾಗು ಮಕ್ಕಳು ಕೂಡ ಘಾಝಿಯಾಬಾದ್ ಗೆ ಬಂದರು. ಆದರೆ ಈಗ ಬಿಜೆಪಿ ಪಟ್ಟಿಯಲ್ಲಿ ನನ್ನ ತಂದೆಯ ಹೆಸರಿದೆ. ನನಗಿದನ್ನು ನೋಡಿ ಆಶ್ಚರ್ಯವಾಯಿತು. ಈ ಬಗ್ಗೆ ತನಿಖೆ ನಡೆಸಲು ಕೋರಿ ದೂರು ಸಲ್ಲಿಸಿದ್ದೇನೆ " ಎಂದು ಗೌರವ್ ಹೇಳಿದ್ದಾರೆ.





