ಪುತ್ತೂರು: ರಸ್ತೆ ಮಧ್ಯೆ ಬಾಳೆಗಿಡ ನೆಟ್ಟ ಸಾರ್ವಜನಿಕರು

ಪುತ್ತೂರು, ಜೂ.20: ಪುತ್ತೂರು ತಾಲೂಕಿನ ಕಬಕದಿಂದ ಬಂಟ್ವಾಳ ತಾಲೂಕಿನ ಓಜಲ ಎಂಬಲ್ಲಿನ ರಸ್ತೆ ತೀರಾ ನಾದುರಸ್ತಿಯಲ್ಲಿದ್ದು ಈ ರಸ್ತೆಯನ್ನು ದುರಸ್ತಿಪಡಿಸಲು ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಇಲಾಖೆ ಸ್ಪಂದಿಸಿಲ್ಲ ಎಂದು ಆರೋಪಿಸಿ ಸ್ಥಳೀಯರು ಸೋಮವಾರ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ಪಂಚಾಯತ್‌ನ ಕುಳ ಗ್ರಾಮ ವ್ಯಾಪ್ತಿಯಲ್ಲಿರುವ ಓಜಳ ರಸ್ತೆಯು ಪುತ್ತೂರು ತಾಲೂಕಿನ ಕಬಕ ಕೊಡಿಪ್ಪಾಡಿಯ ನಡುವೆಯಾಗಿ ಓಜಳಕ್ಕೆ ಹೋಗುತ್ತಿದೆ. ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಕಳೆದ ಹಲವಾರು ಬಾರಿ ಸ್ಥಳೀಯರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈ ತನಕ ಮನವಿಗೆ ಸ್ಪಂದನೆ ದೊರಕಿಲ್ಲ ಎಂದು ಆರೋಪಿಸಿರುವ ಸ್ಥಳೀಯರು ಈ ರೀತಿಯಾಗಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಇಡ್ಕಿದು ಗ್ರಾಮ ಪಂಚಾಯತ್ ಪಿಡಿಒ ಗೋಕುಲ್‌ದಾಸ್ ಅವರು ಆಗಮಿಸಿ ಸ್ಥಳೀಯರಿಂದ ಮನವಿ ಸ್ವೀಕರಿಸಿದರು. ಈ ರಸ್ತೆಯು ಜಿಲ್ಲಾ ಪಂಚಾಯತ್ ವ್ಯಾಪ್ತಿಗೊಳಪಟ್ಟ ರಸ್ತೆಯಾಗಿದ್ದು, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ರಸ್ತೆಯ ದುರಸ್ತಿಯನ್ನು ಕೈಗೆತ್ತಿಕೊಳ್ಳುವುದಾಗಿ ಪಿಡಿಒ ಭರವಸೆ ನೀಡಿದರು.
ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಿದರು. ಸ್ಥಳೀಯ ಮುಂದಾಳುಗಳಾದ ಚಂದ್ರಶೇಖರ ಮತ್ತು ನಾರಾಯಣ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.







