ಚೀನಾದ ಸೂಪರ್ ಕಂಪ್ಯೂಟರ್ ಅಗ್ರ ಸ್ಥಾನದಲ್ಲಿ
ಜಗತ್ತಿನ ವೇಗದ ಕಂಪ್ಯೂಟರ್‌ಗಳ ಪಟ್ಟಿಯಲ್ಲಿ ಅಮೆರಿಕಕ್ಕೆ 3ನೆಸ್ಥಾನ

ಬೀಜಿಂಗ್, ಜೂ. 20: ಜಗತ್ತಿನ ಅತ್ಯಂತ ವೇಗದ ಕಂಪ್ಯೂಟರ್‌ಗಳ ಪಟ್ಟಿಯಲ್ಲಿ ಚೀನಾದ ಸೂಪರ್ ಕಂಪ್ಯೂಟರೊಂದು ಸತತ ಏಳನೆ ಬಾರಿಗೆ ಮೊದಲ ಸ್ಥಾನದಲ್ಲಿದೆ. ಅದೇ ವೇಳೆ, ಈ ಕಂಪ್ಯೂಟರ್ ಮೊದಲ ಬಾರಿಗೆ ಅಮೆರಿಕದ ತಂತ್ರಜ್ಞಾನಕ್ಕೆ ಬದಲು ಚೀನಾದಲ್ಲಿ ವಿನ್ಯಾಸಗೊಳಿಸಲಾದ ಪ್ರೊಸೆಸರ್‌ಗಳನ್ನು ಮಾತ್ರ ಬಳಸಿದೆ.
ಸೋಮವಾರ ಈ ಸಂಬಂಧ ಹೊರಡಿಸಲಾದ ಪ್ರಕಟನೆ, ಚೀನಾದ ಸೂಪರ್ ಕಂಪ್ಯೂಟರ್ ಕ್ಷೇತ್ರದ ಪಾರಮ್ಯವನ್ನು ಎತ್ತಿಹಿಡಿದಿದೆ ಹಾಗೂ ಈ ಕ್ಷೇತ್ರದಲ್ಲಿ ಹಿಂದೆ ಅಮೆರಿಕ ಹೊಂದಿದ್ದ ಹಿಡಿತ ಮತ್ತಷ್ಟು ಸಡಿಲವಾಗಿದೆ.
ಅಮೆರಿಕ ಮತ್ತು ಜರ್ಮನಿಯ ಪರಿಣತರು ಸಿದ್ಧಪಡಿಸಿದ ಪಟ್ಟಿಯಲ್ಲಿ, ಕಳೆದ ವರ್ಷ 500ರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದ ಚೀನಾದ ಕಂಪ್ಯೂಟರ್ ಎರಡನೆ ಸ್ಥಾನಕ್ಕೆ ಜಾರಿದೆ ಹಾಗೂ ಟೆನೆಸಿಯಲ್ಲಿರುವ ಅಮೆರಿಕ ಸರಕಾರದ ಓಕ್ ರಿಜ್ ನ್ಯಾಶನಲ್ ಲ್ಯಾಬೊರೇಟರಿಯಲ್ಲಿರುವ ಕಂಪ್ಯೂಟರ್ ಮೂರನೆ ಸ್ಥಾನದಲ್ಲಿದೆ.
ಅದೇ ವೇಳೆ, ಈ ಬಾರಿ ಅಗ್ರ 500ರ ಪಟ್ಟಿಯಲ್ಲಿ ಅಮೆರಿಕಕ್ಕಿಂತ ಚೀನಾದ ಕಂಪ್ಯೂಟರ್‌ಗಳು ಹೆಚ್ಚಿವೆ. ಈ ಪಟ್ಟಿಯಲ್ಲಿ ಚೀನಾದ 167 ಕಂಪ್ಯೂಟರ್‌ಗಳಿದ್ದರೆ, ಅಮೆರಿಕ 165 ಕಂಪ್ಯೂಟರ್‌ಗಳನ್ನು ಹೊಂದಿದೆ. 29 ಕಂಪ್ಯೂಟರ್‌ಗಳನ್ನು ಹೊಂದಿರುವ ಜಪಾನ್ ಮೂರನೆ ಸ್ಥಾನದಲ್ಲಿದೆ.
ಚೀನಾ ಸರಕಾರವು ಸೂಪರ್ ಕಂಪ್ಯೂಟರ್‌ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಹಾಗೂ ಅಗಾಧ ಆರ್ಥಿಕ ಬೆಂಬಲ ನೀಡಿದೆ. ಈ ಕಂಪ್ಯೂಟರ್‌ಗಳನ್ನು ಹವಾಮಾನ ಮುನ್ನೆಚ್ಚರಿಕೆ, ಪರಮಾಣು ಅಸ್ತ್ರಗಳ ವಿನ್ಯಾಸ, ತೈಲ ನಿಕ್ಷೇಪಗಳ ವಿಶ್ಲೇಷಣೆ ಮತ್ತು ಇತರ ವಿಶೇಷ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.







