ಓದುವಿಕೆಯಿಂದ ಜ್ಞಾನ ವೃದ್ಧಿಯ ಜೊತೆಗೆ ಆರೋಗ್ಯ ಸಮೃದ್ಧಿ: ಕೇಳು ಮಾಸ್ತರ್
ಮಂಜೇಶ್ವರ, ಜೂ.20: ಓದುವಿಕೆಯಿಂದ ಪ್ರತಿಯೊಬ್ಬರ ಜ್ಞಾನ ವೃದ್ಧಿಸುವುದಲ್ಲದೆ ಮಿದುಳಿನ ಕ್ರಿಯಾಶಕ್ತಿ ಅಧಿಕಗೊಂಡು ಆರೋಗ್ಯವೂ ವೃದ್ಧಿಸಲು ಸಾಧ್ಯವಾಗುತ್ತದೆ. ಮನುಷ್ಯ 10 ಗಂಟೆ ಓದಿದರಷ್ಟೆ 1 ಗಂಟೆಯಷ್ಟು ಬರೆಯಲು ಸಾಧ್ಯ. ಓದುವಿಕೆ ಇಲ್ಲದ ವಿದ್ಯೆ ಸಂಸ್ಕಾರ ಶೂನ್ಯ ಎಂದು ಹಿರಿಯ ಸಾಹಿತಿ,ಜಾನಪದ ವಿದ್ವಾಂಸ ಕೇಳು ಮಾಸ್ತರ್ ಅಗಲ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.
ಪೈವಳಿಕೆ ಗ್ರಾ.ಪಂ.ನ ಕಾಯರ್ ಕಟ್ಟೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸೋಮವಾರ ನಡೆದ ವಾಚನ ವಾರಾಚರಣೆ, ವಿವಿಧ ಕ್ಲಬ್‌ಗಳ ಉದ್ಘಾಟನೆ ಹಾಗೂ ಶಾಲಾ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಕ್ಕಳು ತಯಾರಿಸಿದ ಪ್ರತಿಭಾ ಚಿಗುರು ಶಾಲಾ ಸಂಚಿಕೆಯನ್ನು ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಬಿಡುಗಡೆಗೊಳಿಸಿ ಮಾತನಾಡಿ, ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳುವುದರಿಂದ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿಕೊಂಡಂತಾಗುತ್ತದೆ. ಬರೆಯುವವನಿಗೆ ಓದುವವನ ಮೇಲೆ ಹಾಗೂ ಓದುವವನಿಗೆ ಬರೆಯುವವನ ಮೇಲೆ ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಲು ಓದು ಸಹಕಾರಿ ಎಂದರು.
ಶಾಲಾ ಮುಖ್ಯೋಪಾಧ್ಯಾಯ ವೆಂಕಟ್ರಮಣ ನಾಯಕ್ ನೇರೋಳು ಕ್ಲಬ್‌ಗಳನ್ನು ಉದ್ಘಾಟಿಸಿ ಮಾತನಾಡುತ್ತಾ, ಕಲಿಕೆಯೊಂದಿಗೆ ಪಾಠಗಳನ್ನು ಸುಲಲಿತವಾಗಿ ಮನನ ಮಾಡಿಕೊಳ್ಳಲು ಶಾಲೆಯಲ್ಲಿರುವ ಸಮಾಜ,ವಿಜ್ಞಾನ, ಗಣಿತ ಕ್ಲಬ್‌ಗಳು ಸಹಕಾರಿ ಎಂದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಡಿ.ಎಂ.ಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಚ್ಚಿದಾನಂದ ರೈ ಕಳ್ಳಿಗೆ, ಹೈಯರ್ ಸೆಕೆಂಡರಿ ಪ್ರಭಾರ ಪ್ರಾಂಶುಪಾಲ ರಾಜೇಂದ್ರ ಕುಮಾರ್,ದೈವಾರಾಧಕ ರಾಜೇಶ್, ಹಿರಿಯ ಶಿಕ್ಷಕ ಹಮೀದಾಲಿ ಮಾಸ್ತರ್ ಪೆರ್ಲ ಮೊದಲಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ರಂಗದ ಸಮಗ್ರ ಸಾಧನೆಗಾಗಿ ಆಶಯ ಕೆ.ಎಂ., ಕಲಾ ರಂಗದ ಸಾಧನೆಗಾಗಿ ಕೆ.ಶರಣ್ಯ ರೈ, ಪ್ರತಿಭಾ ರಂಗದ ಸಾಧನೆಗಾಗಿ ಶ್ರೇಯ ಡಿ. ಅವರನ್ನು ಪತ್ರಕರ್ತರಾದ ಜಯ ಮಣಿಯಂಪಾರೆ ಹಾಗೂ ಅಖಿಲೇಷ್ ನಗುಮುಗಂ ಸಮ್ಮಾನಿಸಿದರು. ಶಾಲಾ ಅಧ್ಯಾಪಕ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೇಧಾ ನಾಯರ್‌ತ್ತಡ್ಕ ಪ್ರಾರ್ಥಿಸಿದರು. ಶಾಲಾ ಸಿಬ್ಬಂದಿ ಕಾರ್ಯದರ್ಶಿ ಶಂಕರ ನಾರಾಯಣ ಭಟ್ ಸ್ವಾಗತಿಸಿ, ಸರಸ್ವತಿ ವಂದಿಸಿದರು.ಸಂಜೀವ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು.







