ಅಕ್ಷರ್ ಪಟೇಲ್ ಜೀವನಶ್ರೇಷ್ಠ ಸಾಧನೆ
ಏಕದಿನ ರ್ಯಾಂಕಿಂಗ್:
ದುಬೈ, ಜೂ.20: ಐಸಿಸಿ ಏಕದಿನ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಭಾರತದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಜೀವನಶ್ರೇಷ್ಠ 13ನೆ ರ್ಯಾಂಕ್‌ಗೆ ಲಗ್ಗೆ ಇಟ್ಟಿದ್ದಾರೆ.
ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಪಟೇಲ್‌ರೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದ ಜಸ್‌ಪ್ರೀತ್ ಬುಮ್ರಾ ಹಾಗೂ ಧವಳ್ ಕುಲಕರ್ಣಿ ಕೂಡ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.
ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದ ಪಟೇಲ್ ಅಗ್ರ ಸ್ಥಾನದಲ್ಲಿರುವ ಭಾರತದ ಬೌಲರ್ ಆರ್.ಅಶ್ವಿನ್‌ಗಿಂತ ಕೇವಲ ಮೂರು ಸ್ಥಾನದಿಂದ ಹಿಂದುಳಿದಿದ್ದಾರೆ.
ಸರಣಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಪಡೆದಿದ್ದ ವೇಗದ ಬೌಲರ್ ಬುಮ್ರಾ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದು ಏಕದಿನ ರ್ಯಾಂಕಿಂಗ್‌ನಲ್ಲಿ 125 ಸ್ಥಾನ ಭಡ್ತಿಪಡೆದು 97ನೆ ಸ್ಥಾನದಲ್ಲೂ, ಸರಣಿಯಲ್ಲಿ ಒಟ್ಟು 5 ವಿಕೆಟ್ ಪಡೆದಿದ್ದ ಕುಲಕರ್ಣಿ 29 ಸ್ಥಾನ ಭಡ್ತಿ ಪಡೆದು 88ನೆ ಸ್ಥಾನಕ್ಕೇರಿದ್ದಾರೆ.
ವೆಸ್ಟ್‌ಇಂಡೀಸ್‌ನ ಸ್ಪಿನ್ನರ್ ಸುನಿಲ್ ನರೇನ್ ನಂ.1 ಸ್ಥಾನಕ್ಕೆ ಮರಳಿದ್ದಾರೆ. ದಕ್ಷಿಣ ಆಫ್ರಿಕದ ಸ್ಪಿನ್ನರ್ ಇಮ್ರಾನ್ ತಾಹಿರ್ ಮೂರು ಸ್ಥಾನ ಭಡ್ತಿ ಪಡೆದು ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದಾರೆ. ತಾಹಿರ್ ವೆಸ್ಟ್‌ಇಂಡೀಸ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ವಿಂಡೀಸ್ ವಿರುದ್ಧ ಜೀವನಶ್ರೇಷ್ಠ 45ಕ್ಕೆ 7 ವಿಕೆಟ್ ಸಹಿತ ಸರಣಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಉರುಳಿಸಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದೇವೇಳೆ, ಏಕದಿನ ಆಟಗಾರರ ರ್ಯಾಂಕಿಂಗ್‌ನಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಹಾಗೂ ನ್ಯೂಝಿಲೆಂಡ್‌ನ ಕೇನ್ ವಿಲಿಯಮ್ಸನ್ ನಾಲ್ಕನೆ ಸ್ಥಾನ ಹಂಚಿಕೊಂಡಿದ್ದಾರೆ. ಕಿವೀಸ್‌ನ ಇನ್ನೋರ್ವ ಆಟಗಾರ ಮಾರ್ಟಿನ್ ಗಪ್ಟಿಲ್ ಆರನೆ ಸ್ಥಾನದಲ್ಲಿದ್ದಾರೆ.
ರವಿವಾರ ಬಾರ್ಬಡಾಸ್‌ನಲ್ಲಿ ಆಸ್ಟ್ರೆಲಿಯದ ವಿರುದ್ಧ ಮಳೆಬಾಧಿತ ತ್ರಿಕೋನ ಸರಣಿಯಲ್ಲಿ 200ನೆ ಏಕದಿನ ಪಂದ್ಯವನ್ನು ಆಡಿದ್ದ ಎಬಿಡಿವಿಲಿಯರ್ಸ್ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಹಾಶಿಮ್ ಅಮ್ಲ ಕ್ರಮವಾಗಿ 2 ಹಾಗೂ 3ನೆ ಸ್ಥಾನದಲ್ಲಿದ್ದಾರೆ.







