ಶ್ರೇಣಿಕೃತ ವ್ಯವಸ್ಥೆ ಸಮಸಮಾಜ ನಿರ್ಮಾಣಕ್ಕೆ ಅಡ್ಡಿ: ಸಿಎಂ ಸಿದ್ದರಾಮಯ್ಯ
ಪ್ರಗತಿಪರ ಮಠಾಧೀಶರಿಂದ ಅಂಬೇಡ್ಕರ್ ಜನ್ಮದಿನಾಚರಣೆ

ಬೆಂಗಳೂರು, ಜೂ. 20: ವರ್ಣಾಶ್ರಮವೇ ಅಸಮಾನ ತೆಗೆ ಮೂಲ ಕಾರಣ. ಶ್ರೇಣಿಕೃತ ವ್ಯವಸ್ಥೆ ಇರುವವರೆಗೂ ಸಮ ಸಮಾಜ ನಿರ್ಮಾಣ ಅಸಾಧ್ಯ. ಈ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಂಡಾಗ ಮಾತ್ರ ಸಮಾಜ ಬದಲಾವಣೆಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಪ್ರಗತಿಪರ ಮಠಾಧೀಶರ ವೇದಿಕೆ ಆಯೋಜಿಸಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಹಾಗೂ ಸಮಾನತೆಯ ಕಡೆಗೆ ನಮ್ಮ ನಡಿಗೆ ಎಂಬ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾ ಡಿದರು.
ಸಮ ಸಮಾಜ ನಿರ್ಮಾಣ ಮಾಡಲು ಪಟ್ಟಭದ್ರ ಶಕ್ತಿಗಳು ಅಡ್ಡಗಾಲಾಗಿದ್ದಾರೆ. ಇಂಥವರ ವಿರುದ್ಧ ಸಮಾಜ ವನ್ನು ಜಾಗೃತಿಯಿಂದಿರಲು ಎಚ್ಚರಿಕೆ ವಹಿಸಬೇಕಿದೆ. ಈ ಹಿಂದೆ ಸಮ ಸಮಾಜ ನಿರ್ಮಾಣ ಮಾಡಲು ದಾರ್ಶ ನಿಕರು ಹೋರಾಟ ಮಾಡಿ ಸಮಾಜವನ್ನು ಎಷ್ಟೇ ತಿಳಿ ಗೊಳಿಸಿದರು, ಪುನಃ ವೈದಿಕ ಸಮುದಾಯದಿಂದ ನಿರಂತ ರವಾಗಿ ಶೋಷಣೆಯೇ ಮುಂದುವರೆದಿದೆ. ಹೀಗಾಗಿ ಅಸಮಾನತೆಗೆ ಮಾರಕವಾಗಿರುವ ವರ್ಣಾ ಶ್ರಮಕ್ಕೆ ತಿಲಾಂಜಲಿ ಹಾಡಬೇಕು ಎಂದರು.
ಸಾವಿರಾರು ವರ್ಷಗಳಿಂದ ಸಮಾಜಕ್ಕೆ ಅಂಟಿ ಕೊಂಡಿರುವ ಅಸ್ಪಶ್ಯತೆ ಪಿಡುಗು ಹೋಗಲಾಡಿಸಬೇಕಿದೆ. ಸರಕಾರ ಇದರ ಬದಲಾವಣೆಗೆ ಪ್ರಯತ್ನಿಸಿದರೆ, ರಾಜಕೀಯ ಲೇಪನ ಹಚ್ಚುತ್ತಾರೆ. ಹಾಗಾಗಿ ಪ್ರಗತಿಪರ ಮಠಾಧೀಶರೇ ಅಸ್ಪಶ್ಯತೆ ತೊಡೆದುಹಾಕಲು ಮುಂದಾಗಬೇಕು ಎಂದು ಹೇಳಿದರು.
ನಿಡುಮಾಮಿಡಿ ಮಹಾಸಂಸ್ಥಾನದ ಮಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಯನ್ನು ಸಾರ್ವಜನಿಕವಾಗಿ ಆಚರಣೆ ಮಾಡಲು ಮಠಗಳಿಗೆ ಮೊದಲು ಹಿಂಜರಿಕೆಯಿತ್ತು. ಅಂಬೇಡ್ಕರ್ ಬಗ್ಗೆ ಧಾರ್ಮಿಕ ವಲಯದಲ್ಲಿ ಅತೃಪ್ತಿಯಿತ್ತು, ಅಲ್ಲದೆ ಅಂಬೇಡ್ಕರ್ ವಿಚಾರಗಳಿಗೆ ಶಾಶ್ವತವಾಗಿ ಮಠಗಳು ಬಾಗಿಲು ಮುಚ್ಚಿದ್ದವು. ಆದರೆ ಕಾಲ ಬದಲಾಗಿದ್ದು, ಅಂಬೇಡ್ಕರ್ ಅವರ ಸಾಧನೆಯನ್ನು ಅರಿತು ಎಲ್ಲ ಪಂಥೀಯ ಮಠ-ಮಾನ್ಯಗಳು ಅಂಬೇಡ್ಕರ್ ಜಯಂತಿ ಮಾಡಲು ಮುಂದಾಗಿವೆ ಎಂದು ಹರ್ಷ ವ್ಯಕ್ತಪಡಿಸಿ ದರು.
ಬುದ್ಧ, ಬಸವಣ್ಣ, ಸಂತರು, ಪೈಗಂಬರ್, ಜೀಸಸ್‌ರ ಆಚಾರ ವಿಚಾರಗಳನ್ನು ಅರ್ಥ ಮಾಡಿಕೊಳ್ಳದ ಪರಿಣಾಮ ಇಂದು ಸಮಾಜದಲ್ಲಿ ಅಸ್ಪಶ್ಯತೆ ಮುಂದು ವರೆಯುತ್ತಲೇ ಇದೆ. ವೈದಿಕ ಪರಂಪರೆಯನ್ನು ಖಂಡಿಸಿ ಸಮ ಸಮಾಜ ನಿರ್ಮಾಣ ಮಾಡಲು ಮಠ ಮಾನ್ಯಗಳು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಟಿ.ಬಿ. ಜಯಚಂದ್ರ, ಎಚ್.ಕೆ. ಪಾಟೀಲ್, ಕೆ.ಜೆ. ಜಾರ್ಜ್, ಡಾ. ಎಚ್.ಸಿ.ಮಹದೇವಪ್ಪ, ರೋಷನ್ ಬೇಗ್, ಎಚ್. ಆಂಜನೇಯ, ರುದ್ರಪ್ಪ ಲಮಾಣಿ ಹಾಗೂ 300ಕ್ಕೂ ಅಧಿಕ ಮಠ ಗಳ ನೂರಾರು ಮಠಾಧ್ಯಕ್ಷರು, ಮಾತೆಯರು ಸಮಾರಂಭ ದಲ್ಲಿ ಉಪಸ್ಥಿತರಿದ್ದರು.
ಬ್ರಾಹ್ಮಣರ ಕುತಂತ್ರ
ಶೈವ ಪುಣ್ಯ ಕ್ಷೇತ್ರಗಳು ಅಭಿವೃದ್ಧಿಯಾಗಬಾರದು ಎಂಬ ಕುತಂತ್ರದಿಂದ ಚಾಮುಂಡೇಶ್ವರಿ ಮತ್ತು ಹಂಪಿ ದೇವಾಲಯಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.
- ವೀರಭದ್ರ ಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ





