ದಕ್ಷಿಣ ಆಫ್ರಿಕ-ಆಸ್ಟ್ರೇಲಿಯ ಪಂದ್ಯ ಮಳೆಗಾಹುತಿ
ತ್ರಿಕೋನ ಏಕದಿನ

ಬ್ರಿಡ್ಜ್‌ಟೌನ್, ಜೂ.20: ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯ ನಡುವೆ ರವಿವಾರ ಇಲ್ಲಿ ನಡೆಯಬೇಕಾಗಿದ್ದ ತ್ರಿಕೋನ ಏಕದಿನ ಪಂದ್ಯ ಮಳೆಗಾಹುತಿಯಾಗಿದೆ.
ಪಂದ್ಯದಲ್ಲಿ ಕೇವಲ ಒಂದೇ ಓವರ್ ಆಡಲು ಸಾಧ್ಯವಾಗಿದೆ. ದಕ್ಷಿಣ ಆಫ್ರಿಕದ ನಾಯಕ ಎಬಿಡಿ ವಿಲಿಯರ್ಸ್ 200ನೆ ಏಕದಿನ ಪಂದ್ಯ ಆಡಲು ಸಿದ್ಧವಾಗಿದ್ದ ಹಿನ್ನೆಲೆಯಲ್ಲಿ ಈ ಪಂದ್ಯ ಭಾರೀ ಮಹತ್ವ ಪಡೆದಿತ್ತು. ಆದರೆ, ಭಾರೀ ಮಳೆಯು ಎಲ್ಲವನ್ನು ತಲೆಕೆಳಗಾಗಿಸಿತು.
ಟಾಸ್ ಸೋತ ದಕ್ಷಿಣ ಆಫ್ರಿಕ ತಂಡ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿತು. ವೇಗದ ಬೌಲರ್ ಮಾರ್ನೆ ಮೊರ್ಕೆಲ್ ಸರಣಿಯಲ್ಲಿ ಮೊದಲ ಬಾರಿ ಅಂತಿಮ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು.
ದಕ್ಷಿಣ ಆಫ್ರಿಕ ತಂಡ ಒಂದು ಓವರ್ ಬ್ಯಾಟಿಂಗ್‌ನಲ್ಲಿ 8 ರನ್ ಗಳಿಸುತ್ತಲೇ ಮಳೆಯ ಆಗಮನವಾಯಿತು. ಮಳೆ ನಿಲ್ಲದ ಕಾರಣ ಉಭಯ ತಂಡಗಳು ಮತ್ತೆ ಮೈದಾನಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಪಂದ್ಯ ರದ್ದಾಗಿರುವ ಕಾರಣ ದಕ್ಷಿಣ ಆಫ್ರಿಕ ಒಟ್ಟು 12 ಅಂಕವನ್ನು ಗಳಿಸಿ ತ್ರಿಕೋನ ಸರಣಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯ(11 ಅಂಕ) ಹಾಗೂ ವೆಸ್ಟ್‌ಇಂಡೀಸ್(8) ಕ್ರಮವಾಗಿ 2ನೆ ಹಾಗೂ ಮೂರನೆ ಸ್ಥಾನದಲ್ಲಿವೆ.
ದಕ್ಷಿಣ ಆಫ್ರಿಕ ತಂಡ ಇದೇ ಮೈದಾನದಲ್ಲಿ ಶುಕ್ರವಾರ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ವಿಂಡೀಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಜಯಿಸಿದರೆ ರವಿವಾರ ನಡೆಯಲಿರುವ ಫೈನಲ್‌ನಲ್ಲಿ ತನ್ನ ಸ್ಥಾನ ಖಚಿತಪಡಿಸಲಿದೆ.







