ರೋಲರ್ ಸ್ಕೇಟಿಂಗ್: ನಾಲ್ಕರ ಬಾಲೆಯ ಅಪರೂಪದ ಸಾಧನೆ
ಸಾಧನೆಗೆ ವಯಸ್ಸಿನ ಅಂತರವಿಲ್ಲ

ಕಾರವಾರ, ಜೂ.20: ತಾಲೂಕಿನ ಕೈಗಾ ಟೌನ್‌ಶಿಪ್‌ನಲ್ಲಿ ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್ ಆಯೋಜಿಸಿದ್ದ ಲಿಂಬೋ ಸ್ಕೇಟಿಂಗ್‌ನಲ್ಲಿ ಬೃಂದಾವನಿ ಅಬ್ಬಿಗೇರಿ ಎನ್ನುವ ನಾಲ್ಕು ವರ್ಷದ ಬಾಲಕಿ 5.5 ಇಂಚು ಎತ್ತರದ ಸರಳನ್ನು ಪಾಸ್ ಮಾಡುವುದರ ಮೂಲಕ ಜನರು ಹುಬ್ಬೇರಿಸುವಂತೆ ಮಾಡಿ ನೂತನ ದಾಖಲೆ ನಿರ್ಮಿಸಿದ್ದಾಳೆ.
ಕೈಗಾದಲ್ಲಿ ಹಮ್ಮಿಕೊಂಡಿದ್ದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸ್ಕೆಟಿಂಗ್‌ನ ಲಿಂಬೋ ವಿಭಾಗದಲ್ಲಿ 20 ಮೀ. ಅಂತರದಲ್ಲಿ 142 ಮಿ.ಮೀ. ಎತ್ತರದ ಬಾರ್‌ನ್ನು ಪಾಸ್ ಮಾಡಿದ್ದು, 10 ಬಾರ್‌ಗಳನ್ನೊಳಗೊಂಡ 140 ಮಿ.ಮೀ. ಲಿಂಬೋ ಸ್ಕೇಟಿಂಗ್ ಹಾಗೂ 8 ರೌಂಡ್‌ನ 500 ಮೀ. ಪುಶಿಂಗ್ ಬಾರ್‌ನಲ್ಲಿ ಮಹತ್ವದ ಸಾಧನೆಗೈದಿದ್ದಾಳೆ. ರೌಂಡ್ ಮೂಲಕ 600 ಮೀ. ಪುಶಿಂಗ್ ಬಾರ್ ಓಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಈ ಪೋರಿ, 2014ರಲ್ಲಿ ಅವಳ ಹೆಸರಿನಲ್ಲಿದ್ದ ಲಿಮ್ಕಾ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ದಾಖಲೆಗಳನ್ನು ತಾನೇ ಮುರಿದಿದ್ದಾಳೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದ ಯುಎಸ್‌ಎ ನ ರೆಕಾ
ರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಸಂಸ್ಥೆಯ ಪುಸ್ತಕದಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ. ಈಕೆ ಕೈಗಾ ಅಣುವಿದ್ಯುತ್ ನಿಗಮದ ಉದ್ಯೋಗಿಯಾಗಿರುವ ರಾಜಶೇಖರ ಅಬ್ಬಿಗೇರಿ ಹಾಗೂ ಸುಮಿತ್ರಾ ದಂಪತಿಯ ಪುತ್ರಿ. ಈ ಸಾಧನೆಗಾಗಿ ಕಳೆದ ನಾಲ್ಕು ತಿಂಗಳಿನಿಂದ ನಿರಂತರ ತರಬೇತಿ ಪಡೆಯುತ್ತಿದ್ದಳು. ತಂದೆ-ತಾಯಿ ಹಾಗೂ ಕುಟುಂಬ ದವರ ಪ್ರೋತ್ಸಾಹದ ಫಲವಾಗಿ ಸಾಧನೆಯ ಶಿಖರದತ್ತ ದಾಪುಗಾಲಿಟ್ಟಿದ್ದಾಳೆ.





