ತೀರ್ಥಹಳ್ಳಿ: ಕೇಂದ್ರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
ಅಡಿಕೆ ಬೆಲೆ ಕುಸಿತ ಆರೋಪ

ತೀರ್ಥಹಳ್ಳಿ, ಜೂ.20: ಕೇಂದ್ರದಲ್ಲಿರುವ ಮೋದಿ ನೇತೃತ್ವದ ಸರಕಾರದ ಅಡಿಕೆ ಬೆಳೆಗಾರರ ವಿರೋಧಿ ನೀತಿಯಿಂದಾಗಿ ಅಡಿಕೆ ಬೆಳೆಗಾರರಿಂದು ದುಃಸ್ಥಿತಿಗೆ ತಲುಪಿದ್ದಾರೆ. ದೇಶೀಯ ಅಡಿಕೆ ಬೆಳೆಗಾರರನ್ನು ಉಳಿಸುವ ಸಲುವಾಗಿ ಕೇಂದ್ರ ಸರಕಾರ ಗಮನ ಹರಿಸದೇ ಇದ್ದಲ್ಲಿ ಜುಲೈ ಮೊದಲ ವಾರದಲ್ಲಿ ತಾಲೂಕಿನ ಅಡಿಕೆ ಬೆಳೆಗಾರರು ಸೇರಿಕೊಂಡು ಕೇಂದ್ರ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಿದ್ದೇವೆ ಎಂದು ಮಾಜಿ ಸಚಿವ, ಶಾಸಕ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ಪಟ್ಟಣದಲ್ಲಿ ಇಂದು ಯುವ ಕಾಂಗ್ರೆಸ್ ಘಟಕ ಆಯೋಜಿಸಿದ್ದ ಕೇಂದ್ರ ಸರಕಾರದ ಅಡಿಕೆ ಬೆಳೆಗಾರರ ಜೊತೆ ನಡೆಸುತ್ತಿರುವ ವಿರೋಧಿ ನೀತಿ ಹಾಗೂ ಬೆಲೆ ಕುಸಿತವನ್ನು ಖಂಡಿಸಿ ನಡೆಸಿದ ಬೃಹತ್ ಪ್ರತಿಭಟನೆಯ ಬಳಿಕ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ಹಿಂದೆ ಯುಪಿಎ ಸರಕಾರದ ವಿದೇಶಿ ಅಡಿಕೆ ಆಮದು ಪ್ರಕ್ರಿಯೆಗೆ ಕಠಿಣ ನಿರ್ಬಂಧದ ನೀತಿಯಿಂದಾಗಿ ಉತ್ಕೃಷ್ಟ ಹಾಗೂ ಸಂಸ್ಕರಿತ ದೇಶೀಯ ಅಡಿಕೆಗೆ ದೇಶೀಯ ಮಾರು ಕಟ್ಟೆಯಲ್ಲಿ ಉತ್ತಮ ಧಾರಣೆ ಸಿಗುವಂತೆ ಮಾಡಿತ್ತು. ಆದರೆ, ಕೇಂದ್ರ ಸರಕಾರ ವಿದೇಶದಿಂದ ಹೇರಳವಾಗಿ ಕಳಪೆ ಗುಣಮಟ್ಟದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕುಸಿತ ಕಂಡಿದೆ. ಇದಕ್ಕೆ ಮೋದಿ ಸರಕಾರ ನೇರ ಹೊಣೆ ಎಂದು ದೂರಿದರು.
ಇಲ್ಲಿನ ಸಂಸದರು, ಮಾಜಿ ಶಾಸಕರು ಅಡಿಕೆ ಧಾರಣೆ ಕುಸಿತದ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ಕೇವಲ ಜಾಹೀ ರಾತು ಪಕ್ಷವಾಗಿದೆ ಹೊರತು ರೈತರ ಪರವಾದ ಪಕ್ಷವಲ್ಲ ಎಂದು ಟೀಕಿಸಿದರು.
ದೇಶೀಯ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಿದ್ದರೂ ಸಹ ವಿದೇಶದಿಂದ ಉತ್ತರ ಭಾರತದ ಕೆಲವೇ ಕೆಲವು ಪಾನ್ ಕಂಪೆನಿಗಳ ಹಿತಾಸಕ್ತಿ ಕಾಪಾಡುವ ಸಲುವಾಗಿ ವಿದೇಶದಿಂದ ಕಳಪೆ ಗುಣಮಟ್ಟದ ಅಡಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಕೇಂದ್ರ ಸರಕಾರದ ರೈತ ವಿರೋಧಿ ನೀತಿ ಹಾಗೂ ವರ್ತಕರ ಪರವಾದ ನಿಲುವನ್ನು ಎತ್ತಿ ತೋರಿಸುತ್ತಿರುವುದು ಖಂಡನೀಯ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಕೇಂದ್ರ ಸರಕಾರದ ಅಡಿಕೆ ವಿರೋಧಿ ನೀತಿಯಿಂದಾಗಿ ಅಡಿಕೆ ಬೆಳೆಗಾರರು ಬೀದಿಗಿಳಿಯುವ ಸ್ಥಿತಿ ಉಂಟಾಗಿದೆ. ಕೇಂದ್ರದ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್‌ರವರು ಅಡಿಕೆ ಬೆಳೆಗಾರರ ಮೇಲೆ ಮೊಳೆ ಹೊಡೆಯಲು ಹೊರಟಿದ್ದಾರೆ. ಮುಂದಿನ ದಿನದಲ್ಲಿ ಪಕ್ಷಾತೀತವಾಗಿ ಜಿಲ್ಲೆಯ ಮುಖಂಡರು ಕೇಂದ್ರ ಸರಕಾರಕ್ಕೆ ಅಡಿಕೆ ಬೆಳೆಗಾರರ ಪರವಾಗಿ ಮನವಿ ಸಲ್ಲಿಸುವುದು ಅನಿವಾರ್ಯ ಎಂದರು.
ಸಭೆಗೂ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಮುಖಂಡ ರಮೇಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಂ. ಶ್ರೀನಿವಾಸ್, ಜಿಪಂ ಸದಸ್ಯರಾದ ಕಲ್ಪನಾ ಪದ್ಮನಾಭ್, ಭಾರತಿ ಪ್ರಭಾಕರ್, ಶ್ವೇತಾ ರಾಮಚಂದ್ರ, ತಾಪಂ ಸದಸ್ಯರಾದ ಶ್ರುತಿ ವೆಂಕಟೇಶ್, ವೀಣಾ ಗಿರೀಶ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಕೇಳೂರು ಮಿತ್ರ, ಕಿಸಾನ್‌ಸೆಲ್ ಘಟಕದ ವಕ್ತಾರ ಪಡುವಳ್ಳಿ ಹರ್ಷೇಂದ್ರ ಕುಮಾರ್, ಸುಂದರೇಶ್, ಹಾರೋಗೊಳಿಗೆ ಪದ್ಮನಾಭ, ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ ಮತ್ತಿತರರಿದ್ದರು. ಸಭೆಯ ಬಳಿಕ ತಹಶೀಲ್ದಾರ್ ಮೂಲಕ ಕೇಂದ್ರ ಸರಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.







