ಯೋಗ ಮಾಡಿಸುವ ಮೊದಲು ಪಾನನಿಷೇಧ ಜಾರಿಗೆ ತನ್ನಿ
ಪ್ರಧಾನಿ ಮೋದಿಗೆ ನಿತೀಶ್ ಸವಾಲು

ಪಲಾಮು, ಜೂ.20: ‘‘ನಿಮಗೆ ಯೋಗದ ಬಗ್ಗೆ ನಿಜವಾಗಿಯೂ ಕಳಕಳಿ ಇದ್ದರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮೊದಲು ಪಾನನಿಷೇಧ ಜಾರಿ ಮಾಡಿ’’. ಇದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತರಾಟೆಗೆ ತೆಗೆದುಕೊಂಡ ಪರಿ.
ಯೋಗದ ಮೊದಲ ತತ್ವವೇ ಮದ್ಯಪಾನದಿಂದ ಮುಕ್ತರಾಗಿರುವುದು. ಯೋಗಕ್ಕೆ ನೀವು ಒತ್ತು ನೀಡುವಲ್ಲಿ ನಿಮಗೆ ನಿಜಕ್ಕೂ ಕಳಕಳಿ ಇದ್ದರೆ, ಮೊದಲು ಪಾನನಿಷೇಧ ಜಾರಿ ಮಾಡಿ ಎಂದು ನಿತೀಶ್ ಹೇಳಿದರು.
ನೆರೆಯ ಜಾರ್ಖಂಡ್‌ನಲ್ಲೂ ಪಾನನಿಷೇಧ ಜಾರಿಗೊಳಿಸುವಂತೆ ಮನವಿ ಮಾಡಲು ಪಕ್ಷ, ಪಲಾಮುವಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಹಾರದಲ್ಲಿ ಪಾನನಿಷೇಧ ಕಾಯ್ದೆ ಇದ್ದರೂ, ಪಕ್ಕದ ಜಾರ್ಖಂಡ್‌ನಿಂದ ಸರಬರಾಜು ಆಗುವ ಹಿನ್ನೆಲೆಯಲ್ಲಿ, ಇದನ್ನು ಅನುಷ್ಠಾನಗೊಳಿಸುವುದು ಕಷ್ಟ ಎಂದು ಅವರು ಸ್ಪಷ್ಟಪಡಿಸಿದರು. ಕಳೆದ ಎಪ್ರಿಲ್‌ನಲ್ಲಿ ಬಿಹಾರದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೊಳಿಸಿದ ಬಳಿಕ, ನೆರೆರಾಜ್ಯದಲ್ಲೂ ಪಾನನಿಷೇಧ ಆಗ್ರಹಿಸಿ ನಿತೀಶ್, ನೆರೆಯ ಜಾರ್ಖಂಡ್‌ನಲ್ಲಿ ರ್ಯಾಲಿ ಮಾಡುತ್ತಿರುವುದು ಇದು ಎರಡನೆ ಬಾರಿ. ಎಲ್ಲ ರಾಜ್ಯಗಳಲ್ಲೂ ಪಾನನಿಷೇಧ ಜಾರಿಗೊಳಿಸುವಂತೆ ಆಗ್ರಹಿಸುತ್ತಲೇ ಬಂದಿರುವ ಜೆಡಿಯು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಲು ಈ ಪ್ರಚಾರ ದೊಡ್ಡ ಕೊಡುಗೆ ನೀಡಿತ್ತು.







