ಗೊಂದಲದ ಗೂಡಾಗುತ್ತಿದೆಯೇ ಜಾತ್ಯತೀತ ಜನತಾದಳ?
ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಯಾವುದನ್ನೂ ಸರಿಯಾಗಿ ಊಹಿಸಲಾಗದು. ಆದರೂ ಇತ್ತೀಚಿನ ಬೆಳವಣಿಗೆಯನ್ನು ನೋಡಿದಾಗ, ಜಾತ್ಯತೀತ ಜನತಾದಳ ಸಂಕಷ್ಟದಲ್ಲಿ ಮತ್ತು ಬಿಡಿಸಲಾಗದ ಗೊಂದಲದಲ್ಲಿ ಸಿಲುಕಿಕೊಂಡಂತೆ ಕಾಣುತ್ತಿದೆ. ಸಾಮಾನ್ಯವಾಗಿ ಒಂದು ರಾಜಕೀಯ ಪಕ್ಷ ಇನ್ನೊಂದು ರಾಜಕೀಯ ಪಕ್ಷವನ್ನು ಮುಗಿಸುವುದು ರಾಜಕೀಯ ಚದುರಂಗದಾಟದಲ್ಲಿ ತೀರಾ ಸಾಮಾನ್ಯ. ಆದರೆ, ಜೆಡಿಎಸ್ ತನ್ನ ಸ್ವಯಂಕೃತ ಅಪರಾಧದಿಂದ ಈ ಸ್ಥಿತಿಗೆ ತಲುಪಿದೆ ಎನ್ನಬಹುದು. ಈ ದುರಂತದಲ್ಲಿ ಬೇರೊಂದು ಪಕ್ಷ ಕೇವಲ ನೆಪಮಾತ್ರಕ್ಕೆ. ತನ್ನ ಅನುಕೂಲಕ್ಕೆ ಮತ್ತು ಲಾಭಕ್ಕೆ ತಕ್ಕಂತೆ ರಾಷ್ಟ್ರೀಯ ಪಕ್ಷ ಮತ್ತು ಪ್ರಾಂತೀಯ ಪಕ್ಷಗಳ ಲೇಬಲ್ ಅಂಟಿಸಿಕೊಂಡು, ಸೆಕ್ಯುಲರ್ ಮುಖವಾಡದಲ್ಲಿ ದಶಕಗಳ ಕಾಲ ಆಟವಾಡಿದ ಪಕ್ಷ, ಇಂದು ಈ ಸ್ಥಿತಿಗೆ ತಲುಪುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ದೇವೇಗೌಡರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಮತ್ತು ಫೀನಿಕ್ಸ್ ಪಕ್ಷಿಯಂತೆ ಮೇಲೇಳುತ್ತೇನೆ ಎಂದು ಕಾರ್ಯ ಪೃವೃತ್ತರಾಗಬಹುದು. ಕುಮಾರ ಸ್ವಾಮಿಯವರೂ ಛಲಬಿಡದ ವಿಕ್ರಮನಂತೆ ಹೋರಾಡಬಹುದು. ಆದರೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಭಾಜಪಕ್ಕೆ ಪರ್ಯಾಯವಾಗಿ, ಆರು ಕೋಟಿ ಕನ್ನಡಿಗರ ಆಸೆ-ಆಕಾಂಕ್ಷೆಗಳಿಗೆ ಸ್ಪಂದಿಸಲು, ತಮಿಳುನಾಡಿನ ದ್ರಾಮುಕ ಮತ್ತು ತೆಲಂಗಾಣ ಹಾಗೂ ಆಂಧ್ರದ ಪ್ರಾದೇಶಿಕ ಪಕ್ಷಗಳಂತೆ ರಾಷ್ಟ್ರ ಮಟ್ಟದಲ್ಲಿ ಕಿಂಗ್ ಮೇಕರ್ ಆಗುವ ಸುವರ್ಣಾವಕಾಶವನ್ನು ಕೈಯಾರೆ ಬಿಟ್ಟುಕೊಟ್ಟದ್ದು, ಕನ್ನಡಿಗರ ದುರ್ದೈವ ಎನ್ನಬಹುದು.
ಇನ್ನೊಮ್ಮೆ ಕುಮಾರ ಸ್ವಾಮಿಯವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ನೋಡಬಯಸುತ್ತೇನೆ ಎನ್ನುವ ದೇವೇಗೌಡರ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅವರು ವೇದಿಕೆಯಲ್ಲಿ ಏನೇ ಹೇಳಿದರೂ, ಪಕ್ಷ ಕಟ್ಟಿದ ಅವರ ಹಿಂದಿನ ಉದ್ದೇಶ ಅರ್ಥವಾಗದಿರದು. ತಂದೆ ಮಕ್ಕಳ ಪಕ್ಷವೆಂದು ಮಾಧ್ಯಮದಲ್ಲಿ ಸದಾ ಟೀಕಿಸಲ್ಪಡುತ್ತಿದ್ದ ಪಕ್ಷ, ಕೊನೆ ಕೊನೆಗೆ ತಂದೆ, ಮಕ್ಕಳ, ಮೊಮ್ಮಕ್ಕಳ ಮತ್ತು ಸೊಸೆಯಂದಿರ ಪಕ್ಷವಾಗಿದೆ ಎನ್ನುವ ಟೀಕೆ ಬಲವಾಗಿ ಕೇಳಿಬರುತ್ತಿತ್ತು. ಅವರ ಕೆಲವು ಸಂಕುಚಿತ ರಾಜಕೀಯ ಧೋರಣೆಗಳಿಂದಾಗಿ, ಅಖಿಲ ಕರ್ನಾಟಕ ಪಕ್ಷವಾಗಿ ಜೆಡಿಎಸ್ ಬೆಳೆಯಲಿಲ್ಲ. ಹುಬ್ಬಳ್ಳಿಯಲ್ಲಿ ನೈಋತ್ಯ ರೈಲು ಸ್ಥಾಪನೆ ವಿಚಾರದಲ್ಲಿ, ತಮ್ಮ ಪಕ್ಷದ ನಾರಾಯಣ ಸ್ವಾಮಿ ಎನ್ನುವ ಸಂಸದರ ಮೂಲಕ ಒಡ್ಡಿದ ಅಡೆ ತಡೆಯನ್ನು ಉತ್ತರ ಕರ್ನಾಟಕದವರು ದಶಕಗಳ ನಂತರವೂ ನೆನೆಸಿಕೊಳ್ಳುತ್ತಾರೆ. ಇಂದಿಗೂ ಆ ಪಕ್ಷ ಉತ್ತರ ಕರ್ನಾಟಕದಲ್ಲಿ ತಳವೂರಲಿಲ್ಲ. ಅದು ದಕ್ಷಿಣ ಕರ್ನಾಟಕದ ಕೆಲವು ಭಾಗದ ಪಕ್ಷವಾಗಿ ಉಳಿದಿದೆ. ಕರಾವಳಿಯಲ್ಲೂ ಗಳಿಸಿದ್ದ ಎರಡು ಸ್ಥಾನಗಳನ್ನು ನಂತರದ ಚುನಾವಣೆಯಲ್ಲಿ ಕಳೆದುಕೊಂಡಿತು.
ಅದು ರಾಜಕೀಯ ಪಕ್ಷ ಬಲವಾಗಿ ನೆಲೆಕಾಣ ಬೇಕಿದ್ದರೆ, ಆಂತರಿಕ ಪ್ರಜಾಸತ್ತೆ ಮತ್ತು ಸ್ವಾತಂತ್ರ್ಯ ಮುಖ್ಯ. ಅದು ಇಲ್ಲದಿದ್ದಾಗ ಅಥವಾ ಅದು ಕಾಟಾಚಾರಕ್ಕೆ ಮತ್ತು ತೋರಿಕೆಗೆ ಮಾತ್ರ ಇದ್ದಾಗ, ಆ ಪಕ್ಷದ ಅವಸಾನ ಆರಂಭವಾಗುತ್ತದೆ. ಜೆಡಿಎಸ್‌ನ ಇಂದಿನ ಸ್ಥಿತಿಗೆ ಇದೇ ಕಾರಣ. ಇತ್ತ್ತೀಚಿನ ವಿಧಾನ ಪರಿಷತ್ ಮತ್ತು ರಾಜ್ಯ ಸಭಾ ಚುನಾವಣೆಯಲ್ಲಿ ಆ ಪಕ್ಷದ ಸದಸ್ಯರು ಗೌಡರ ಮಾತಿಗೆ ಕೇವಲ ಮಣೆಹಾಕಲಿಲ್ಲ ಮಾತ್ರವಲ್ಲ, ಅದನ್ನು ಬಹಿರಂಗವಾಗಿ ಘೋಷಿಸಿದರೂ ಕೂಡ. ಗೌಡರ ಬಗೆಗೆ ಮತ್ತು ಅವರ ಕಾರ್ಯ ವೈಖರಿಯ ಬಗೆಗೆ ಆ ಪಕ್ಷದ ಸದಸ್ಯರ ಆಕ್ರೋಶದ ಆಳವನ್ನು ಇದು ತೋರಿಸುತ್ತದೆ. ಈ ಪಕ್ಷದ ಸುಮಾರು ಎರಡು ದಶಕದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸದಸ್ಯರು ಇಷ್ಟು ಬಹಿರಂಗವಾಗಿ ಧುರೀಣತ್ವದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಪಕ್ಷ ಕಟ್ಟಲು ಕಾರ್ಯಕರ್ತರು ಬೇಕು, ಚುನಾವಣೆಯಲ್ಲಿ ದುಡಿಯಲು ಕಾರ್ಯಕರ್ತರು ಬೇಕು, ಆದರೆ, ಅಧಿಕಾರ ಹಿಡಿಯುವಾಗ ಮತ್ತು ಅದರ ಫಲವನ್ನು ಉಣ್ಣುವಾಗ ‘ಕೆಲವರು’ ಸಾಕು ಎನ್ನುವ ಪಕ್ಷದ ಧೋರಣೆ ಪಕ್ಷದಲ್ಲಿ ತೀವ್ರ ಭಿನ್ನಮತವನ್ನು ಸೃಷ್ಟಿಸಿದೆ. ಸುಮಾರು ಐವತ್ತು ವರ್ಷದ ದೀರ್ಘ ರಾಜಕೀಯದಲ್ಲಿ, ದೇಶದ ಉನ್ನತ ಅಧಿಕಾರ ಸ್ಥಾನವನ್ನು ಪಡೆದರೂ, ಗೌಡರಿಗೆ ಇನ್ನೂ ಅಧಿಕಾರದ ಹಂಬಲ ಹೋಗಿಲ್ಲ ಎನ್ನುವ ಕೂಗು ಮತ್ತು ಆರೋಪ ಆ ಪಕ್ಷದಲ್ಲಿ ಕೇಳುತ್ತಿದೆ. ಗೌಡರು ರಾಜಕೀಯದಿಂದ ನಿವೃತ್ತರಾಗಿ ಮುತ್ಸದ್ಧಿಯಂತೆ ಮಾರ್ಗದರ್ಶನ ಮಾಡಬೇಕು ಮತ್ತು ಪಕ್ಷದಲ್ಲಿ ಆಂತರಿಕ ಪ್ರಜಾಸತ್ತೆಗೆ ಹೆಚ್ಚು ಒತ್ತು ಕೊಡಬೇಕು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ಪಡುತ್ತಾರೆ. ರಾಜ್ಯ ಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯ ಸಮಯದಲ್ಲಿ ಕಾರ್ಯಕರ್ತರ ಮತ್ತು ಎರಡನೆ ಸ್ತರದ ನಾಯಕರ ಸಹನೆಯ ಕಟ್ಟೆ ಒಡೆದಿದ್ದು ಒಂದು ರೀತಿಯ ‘ಮಾಡು ಅಥವಾ ಮಡಿ’ ಮತ್ತು ‘ಈಗಲ್ಲದಿ ದ್ದರೆ ಇನ್ಯಾವಾಗ’ ಎನ್ನುವ ಮಟ್ಟಕ್ಕೆ ತಲುಪಿತು. ಭಾಜಪ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಹೊರಗಿನವರಿಗೆ ಮತ್ತು ಉದ್ಯಮಿಗಳಿಗೆ ಟಿಕೆಟ್ ಕೊಡುವುದರ ವಿರುದ್ಧ ದೊಡ್ಡಮಟ್ಟದ ವಿರೋಧ ವ್ಯಕ್ತವಾಗುತ್ತಿರುವಾಗ ಮತ್ತು ಆ ಪಕ್ಷಗಳು ಈ ವಿರೋಧಕ್ಕೆ ಸ್ಪಂದಿಸುತ್ತಿರುವಾಗ, ಜೆಡಿಎಸ್ ಕೂಡಾ ಈ ನಿರ್ಧಾರ ತೆಗೆದುಕೊಂಡಿದ್ದರೆ, ಅದು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಹೈಕಮಾಂಡ್, ಹಿರಿಯರು, ಪಕ್ಷದ ಶಿಸ್ತಿನ ಹೆಸರಿನಲ್ಲಿ, ಆನೆ ಹೋಗಿದ್ದೇ ದಾರಿ ಎನ್ನುವಂತೆ ತನ್ನ ಎಂದಿನ ಹಾದಿಯಲ್ಲಿ ಮುಂದುವರಿಯಿತು. ಮೊದಮೊದಲು ಸ್ವಲ್ಪ ಪ್ರತಿಭಟಿಸಿದರೂ ಎಲ್ಲರೂ ಹಾದಿಗೆ ಬಂದೇ ಬರುತ್ತಾರೆ ಎಂಬ ಅದಮ್ಯ ವಿಶ್ವಾಸ ಇತ್ತು. ಆದರೆ, ಅವರ ಲೆಕ್ಕಾಚಾರ ಈ ಬಾರಿ ತಪ್ಪಿದೆ. ಕುಮಾರ ಸ್ವಾಮಿಯವರು ಹೇಳುವಂತೆ, ಇದರಿಂದ ಪಕ್ಷವೇನು ಮುಳುಗುವುದಿಲ್ಲ. ಆದರೆ, ಕೇವಲ ಎಂಟರಿಂದ ಆರಂಭವಾದದ್ದರ ಹಿಂದೆ ಹದಿನೆಂಟು ಇದ್ದರೆ? ಮಾಧ್ಯಮಗಳ ವರದಿ ಪ್ರಕಾರ ಇನ್ನೂ ಇಪ್ಪತ್ತು ಮಂದಿ ಈ ಹಾದಿಯನ್ನು ತುಳಿಯವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ರಾಜಕೀಯದಲ್ಲಿ ಎಲ್ಲವೂ ಸಾಧ್ಯ.
ಸದ್ಯ ಧುರೀಣತ್ವವನ್ನು ಧಿಕ್ಕರಿಸಿದ, ಎಂಟು ಜನರನ್ನು ಮತ್ತು ಮುಂದೆ ಇವರನ್ನು ಅನುಸರಿಸುವವರನ್ನು, ಪಕ್ಷವು ಉಚ್ಚಾಟಿಸಬಹುದು. ಕೆಲವು ದಿನ ಅವರ ಪರ ಮತ್ತು ವಿರುದ್ಧ ಹಾದಿ-ಬೀದಿಯಲ್ಲಿ ಪ್ರತಿಭಟನೆಗಳಾಗ ಬಹುದು. ಕೆಲವಷ್ಟು ಮಣ್ಣು ರಾಡಿಯನ್ನು ಎರಚಿಕೊಳ್ಳಬಹುದು. ಈ ವರೆಗೆ ಗೌಪ್ಯವಾಗಿದ್ದ ಕೆಲವು ಸತ್ಯ ಮತ್ತು ಸುಳ್ಳುಗಳ ಅನಾವರಣ ಆಗಬಹುದು. ಆದರೆ, ಇವರನ್ನು ತಮ್ಮ ತೆಕ್ಕೆಗೆ ಸೇರಿಸಿಕೊಳ್ಳಲು ಎರಡು ರಾಷ್ಟ್ರೀಯ ಪಕ್ಷಗಳು ಕಾತುರದಿಂದ ಕಾಯುತ್ತಿರುವಾಗ, ಸದ್ಯದ ಮಟ್ಟಿಗೆ ಅವರ ರಾಜಕೀಯ ಭವಿಷ್ಯ ಆತಂಕಕಾರಿಯಾಗಿರುವುದಿಲ್ಲ. ಆದರೆ ತನ್ನ ಅಸ್ಪಷ್ಟ, ಗೊಂದಲಮಯ ಧೋರಣೆ, ನಿಲುವು ಮತ್ತು ತತ್ವಗಳಿಂದಾಗಿ, ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಅವಕಾಶವನ್ನು, ಆಂತರಿಕ ಕಚ್ಚಾಟದಿಂದಾಗಿ, ಅಧಿಕಾರದ ಕೇಂದ್ರೀಕರಣದ ಅಗೋಚರ ಕಾರ್ಯಸೂಚಿಯಿಂದಾಗಿ, ಕುಟುಂಬ ರಾಜಕಾರಣದ ಹಿಡಿತದಿಂದಾಗಿ ಕಳೆದುಕೊಂಡಿತು ಎಂದು ಪ್ರಜ್ಞಾವಂತ ಕನ್ನಡಿಗರು ಹತಾಶೆ ವ್ಯಕ್ತ ಪಡಿಸುತ್ತಾರೆ.







