ರಾಜ್ಯ ಸಂಪುಟ ಪುನಾರಚನೆ: ಕೆಲ ದಂಡಪಿಂಡಗಳಿಂದ ಮುಕ್ತಿ

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದಲ್ಲಿ ಮತ್ತೆ ಕಾಗೆಗಳ ಕೂಗುಗಳು ಕೇಳಿ ಬರುತ್ತಿವೆ. ಈವರೆಗೆ ಸಿದ್ದರಾಮಯ್ಯ ಸರಕಾರದ ಸಚಿವರ ಕಾರ್ಯವೈಫಲ್ಯವನ್ನು ಟೀಕಿಸುತ್ತಿದ್ದ ಮಾಧ್ಯಮಗಳೊಳಗಿರುವ ಕೆಲವು ಕಾಗೆಗಳು ಇದೀಗ, ಅದೇ ವಿಫಲ ಮಾಜಿ ಸಚಿವರ ಬೆನ್ನ ಹಿಂದೆ ನಿಂತು ಸರಕಾರದೆಡೆಗೆ ಬಾಣ ಬಿಡಲು ಹೊರಟಿವೆ. ಸಂಪುಟದಿಂದ ಹೊರ ಬಿದ್ದಿರುವ ಕೆಲವು ದಂಡಪಿಂಡ ಸಚಿವರ ಬೀದಿ ಆರ್ತನಾದವನ್ನೇ ವೈಭವೀಕರಿಸಿ, ಸರಕಾರವನ್ನು ದುರ್ಬಲಗೊಳಿಸಲು ಯತ್ನಿಸುತ್ತಿವೆ. ಸಂಪುಟದೊಳಗಿರುವ ಸಚಿವರ ಕಾರ್ಯವೈಖರಿಯ ಬಗ್ಗೆ ಸ್ವತಃ ಕಾಂಗ್ರೆಸ್ ಪಕ್ಷದೊಳಗಿನ ಶಾಸಕರಲ್ಲೇ ಅಸಮಾಧಾನವಿತ್ತು.
ಈ ಹಿಂದೆ ಎರಡು ಬಾರಿ ನಡೆದ ಶಾಸಕಾಂಗ ಸಭೆಗಳಲ್ಲೂ ಅದು ಸ್ಫೋಟಗೊಂಡಿತ್ತು. ಮಾಧ್ಯಮಗಳು ಇವುಗಳನ್ನಿಟ್ಟುಕೊಂಡು ಕೆಲವು ಸಚಿವರ ಕಾರ್ಯವೈಖರಿಯನ್ನು ವಿಮರ್ಶಿಸಿದ್ದವು. ಅಂಬರೀಷ್, ವಿನಯಕುಮಾರ್ ಸೊರಕೆ, ಪರಮೇಶ್ವರ್ ನಾಯ್ಕಿ, ಶಾಮನೂರು ಶಿವಶಂಕರಪ್ಪ, ಬಾಬುರಾವ್ ಚಿಂಚನಸೂರು...ಇವರೆಲ್ಲರನ್ನು ಕಟ್ಟಿಕೊಂಡು ಸಿದ್ದರಾಮಯ್ಯ ಆಡಳಿತ ಚಕ್ರವನ್ನು ತಿರುಗಿಸಲಾಗದೇ ಏದುಸಿರು ಬಿಡುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕೆಲವರನ್ನು ಹೊರ ಹಾಕಿ, ಹೊಸ ಮುಖಗಳಿಗೆ, ಹೊಸ ಆಲೋಚನೆಗಳಿಗೆ ಅವಕಾಶ ನೀಡಬೇಕು ಎನ್ನುವ ಕೂಗು ಕಳೆದ ಒಂದೆರಡು ವರ್ಷಗಳಿಂದ ಕೇಳಿ ಬರುತ್ತಿತ್ತು. ಮಾಧ್ಯಮಗಳಲ್ಲಿ ಇದು ಪದೇ ಪದೇ ಚರ್ಚೆಯಾಗುತ್ತಿತ್ತು. ಇದೀಗ ಎಲ್ಲ ಅವಲೋಕನಗಳ ಬಳಿಕ ಸಿದ್ದರಾಮಯ್ಯ ಅವರು ತುಸು ಧೈರ್ಯದಿಂದ ಸಂಪುಟ ಪುನಾರಚನೆಗೆ ಕೈ ಹಾಕಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಕೆಲವು ನೀರಸ ಮುಖಗಳು ತಲೆ ಹಾಕಿವೆಯಾದರೂ, ಹೊರ ಹಾಕಲೇಬೇಕಾದಂತಹ ಕೆಲವು ದಂಡಪಿಂಡಗಳಿಗೆ ಗೇಟ್‌ಪಾಸ್ ನೀಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿರುವುದೇ ಅವರ ದೊಡ್ಡ ಸಾಧನೆ. ಈ ಪಟ್ಟಿಯಲ್ಲಿ, ಅಂಬರೀಷ್ ಹೆಸರನ್ನು ಅಗ್ರಸ್ಥಾನದಲ್ಲಿ ನಿಲ್ಲಿಸಬಹುದಾದರೆ, ಜೊತೆ ಜೊತೆಗೆ ಪರಮೇಶ್ವರ್ ನಾಯ್ಕಾ, ಸೊರಕೆ, ತಂಗಡಗಿ, ಶಾಮನೂರು, ಚಿಂಚನಸೂರು ಮೊದಲಾದ ಹೆಸರುಗಳನ್ನು ಯಾವ ಎಗ್ಗಿಲ್ಲದೆ ಉಲ್ಲೇಖಿಸಬಹುದಾಗಿದೆ.
ಅಂಬರೀಷ್ ಸಚಿವರಾಗಿರುವುದ್ದರಿಂದ ಏನಾದರೂ ಪ್ರಯೋಜನವಾಗಿದ್ದಿದ್ದರೆ ಅದು ಅಂಬರೀಷ್ ಕುಟುಂಬಕ್ಕೆ ಮಾತ್ರ. ಅವರ ದುಬಾರಿ ವೈದ್ಯಕೀಯ ಶುಲ್ಕವನ್ನು ಪಾವತಿಸಲು ಅವರಿಗೆ ಈ ಸಚಿವ ಸ್ಥಾನ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತಿತ್ತು. ಉಳಿದಂತೆ ಅತ್ಯಂತ ಉದ್ಧಟತನ, ಬೇಜವಾಬ್ದಾರಿ, ಸೋಮಾರಿತನಗಳಿಗೆ ಕುಖ್ಯಾತರಾಗಿ ಸರಕಾರಕ್ಕೆ ಕೆಟ್ಟ ಹೆಸರು ತಂದವರು. ಇಷ್ಟಾದರೂ ಪಕ್ಷಕ್ಕೆ ನಯಾ ಪೈಸೆ ಪ್ರಯೋಜನವಾಗದೆ, ಪಕ್ಷದೊಳಗೇ ಭಿನ್ನ ಚಟುವಟಿಕೆಗಳನ್ನು ನಡೆಸಿ ಉಂಡತಟ್ಟೆಯ ಋಣ ಮರೆತವರು. ಸಚಿವನಾಗಿ ತಾನು ಮಾಡಿರುವ ಘನಕಾರ್ಯಗಳ ಬಗ್ಗೆ ಒಂದಿಷ್ಟು ಆತ್ಮವಿಮರ್ಶೆ ಮಾಡಿಕೊಳ್ಳದ ಇವರು, ತನ್ನನ್ನು ಉಪಯೋಗಿಸಿಕೊಂಡು ದ್ರೋಹವೆಸಗಿದ್ದಾರೆ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಶಾಸಕರಾಗಿ, ಸಚಿವರಾಗಿ, ಜನಸಾಮಾನ್ಯರಿಗೆ ಇವರು ಎಸಗಿದ ದ್ರೋಹಗಳ ಬಗ್ಗೆ ಮಾತನಾಡುವವರು ಯಾರು? ಇಂದು ಅಂಬರೀಷ್‌ರಂತಹ ಸಚಿವರನ್ನು ಕಿತ್ತು ಹಾಕಿರುವುದಕ್ಕೆ ರಾಜ್ಯದ ಬಹುಸಂಖ್ಯೆಯ ಜನರು ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಗ್ಗೇಶ್‌ರಂತಹ ಕೆಲವು ಕಾಮಿಡಿ ನಟರು ಪತ್ರಿಕಾಗೋಷ್ಠಿ ಕರೆದು, ಅಂಬರೀಷ್‌ರನ್ನು ಹೊರ ಹಾಕಿರುವುದಕ್ಕಾಗಿ ಪರೋಕ್ಷ ಬೆದರಿಕೆ ಹಾಕುತ್ತಿದ್ದಾರೆ. ಚಿತ್ರೋದ್ಯಮವನ್ನು ಬಂದ್ ಮಾಡುತ್ತೇವೆ ಎಂದು ಸರಕಾರವನ್ನು ಬ್ಲಾಕ್‌ಮೇಲ್ ಮಾಡಲು ಹೊರಟಿದ್ದಾರೆ.
ಜಗ್ಗೇಶ್ ಅವರ ಅಧಿಕೃತ ಪಕ್ಷ ಬಿಜೆಪಿ. ಕಾಂಗ್ರೆಸ್‌ನ್ನು ಮಟ್ಟ ಹಾಕಬೇಕಾದರೆ ಅಂಬರೀಷ್ ಸಚಿವರಾಗಿರುವುದು ಅತ್ಯಗತ್ಯ ಎನ್ನುವುದನ್ನು ಇವರು ಕಂಡುಕೊಂಡಿದ್ದಾರೆ ಎಂಬುದು ಇದರರ್ಥವಲ್ಲವೇ? ಅಂಬರೀಷ್ ಇಡೀ ಚಿತ್ರೋದ್ಯಮವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಬಾಲಿಶ ಹೇಳಿಕೆಯನ್ನು ನೀಡಿದ್ದಾರೆ ಜಗ್ಗೇಶ್. ಅಂಬರೀಶ್ ಚಿತ್ರೋದ್ಯಮವನ್ನು ಪ್ರತಿನಿಧಿಸಿ ಶಾಸಕನಾಗಿಲ್ಲ. ಅವರಿಗೆ ಮತ ಹಾಕಿದವರು ಚಿತ್ರೋದ್ಯಮಿಗಳು, ಸಿನಿಮಾ ನಟರಲ್ಲ. ಬದಲಿಗೆ ಜನಸಾಮಾನ್ಯರು ಅವರನ್ನು ಮತ ಹಾಕಿ ವಿಧಾನಸಭೆಗೆ ಕಳುಹಿಸಿಕೊಟ್ಟಿದ್ದಾರೆ. ಅಂಬರೀಷ್ ಕೆಲಸ ಮಾಡಬೇಕಾಗಿರುವುದು ಚಿತ್ರರಂಗಕ್ಕಲ್ಲ, ತನ್ನ ಕ್ಷೇತ್ರಕ್ಕಾಗಿ. ಸಚಿವರಾದ ಬಳಿಕ ನಾಡಿನ ಜನರಿಗಾಗಿ ಕೆಲಸ ಮಾಡಬೇಕು. ಆದರೆ ಸದನದಲ್ಲಿ ಇವರು ತನ್ನ ಪಾತ್ರವನ್ನು ಎಷ್ಟರಮಟ್ಟಿಗೆ ನಿರ್ವಹಿಸಿದ್ದಾರೆ ಎನ್ನುವುದನ್ನು ಅವರ ಹಾಜರಾತಿಯೇ ತಿಳಿಸುತ್ತದೆ. ಅಭಿಮಾನಿ ಜಗ್ಗೇಶ್‌ಗಾಗಿ ರಾಜ್ಯದ ಜನರು ಬೆಲೆ ತೆರಬೇಕು ಎನ್ನುವುದರಲ್ಲಿ ಯಾವ ಅರ್ಥವೂ ಇಲ್ಲ. ಇದೇ ಸಂದರ್ಭದಲ್ಲಿ ಸಚಿವ ಸ್ಥಾನದಿಂದ ವಿವಿಧ ನಾಯಕರನ್ನು ಹೊರ ಹಾಕಿರುವುದಕ್ಕಾಗಿ ಕೆಲವು ಮಾಜಿ ಸಚಿವರು ತಮ್ಮ ಚೇಲಾಗಳನ್ನು ಬೀದಿಗಿಳಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.
ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡುತ್ತಿದ್ದಾರೆ. ಇದು ಅಕ್ಷಮ್ಯ. ಸಚಿವ ಸ್ಥಾನ ಆಯಾ ನಾಯಕರ ವೈಯಕ್ತಿಕ ವಿಷಯ. ತಮ್ಮ ನಾಯಕರು ಸಚಿವ ಸ್ಥಾನವನ್ನು ನಿರಾಕರಿಸಿದ್ದರೆ ಅವರ ವಿರುದ್ಧ ಹೇಳಿಕೆ ನೀಡಲಿ, ಬೇಕಾದರೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳಲಿ. ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಬರದಿಂದ ಜನರು ತತ್ತರಿಸಿದಾಗ, ಯಾವುದೇ ಸಾಮಾಜಿಕ ಸಮಸ್ಯೆಗಳಿಗಾಗಿ ಬೀದಿಗಿಳಿಯದ ಈ ಅಭಿಮಾನಿಗಳು ತಮ್ಮ ನಾಯಕರ ಸ್ಥಾನ ಕೈ ತಪ್ಪಿದಾಗ ಬೀದಿಗಿಳಿದಿರುವುದು ಜನದ್ರೋಹವಾಗಿದೆ. ಯಾವನೋ ಶಾಸಕ ಸಚಿವ ಸ್ಥಾನ ಕಳೆದುಕೊಂಡಿರುವುದು ಜನರ ಮೂಲಭೂತ ಸಮಸ್ಯೆಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅವರು ಆ ಬಗ್ಗೆ ಪಕ್ಷದ ಹೈಕಮಾಂಡ್ ಜೊತೆಗೆ ವ್ಯವಹರಿಸುವುದು ರಾಜಕೀಯ ಭವಿಷ್ಯದ ಹಿನ್ನೆಲೆಯಲ್ಲಿ ಒಳಿತು. ಇಲ್ಲವಾದರೆ ಇವರಿಗೆ ಜನರೇ ಉತ್ತರಿಸುತ್ತಾರೆ.
ಇದೇ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ, ಶ್ರೀನಿವಾಸ್ ಪ್ರಸಾದ್‌ರಂಥವರು ಹೊರ ಹೋಗಬಾರದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಶ್ರೀನಿವಾಸ್ ಪ್ರಸಾದ್ ಪ್ರಗತಿಪರ ಆಲೋಚನೆಗಳುಳ್ಳ, ಸಾಮಾಜಿಕ ಕಾಳಜಿಯುಳ್ಳ ಹಿರಿಯ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ವಯಸ್ಸು, ಆ ಸ್ಥಾನಕ್ಕೆ ಸಹಕರಿಸುತ್ತಿಲ್ಲ. ಬರದಂತಹ ಸಂದರ್ಭದಲ್ಲಿ ರಾಜ್ಯಾದ್ಯಂತ ಸುತ್ತಾಡಿ ತನ್ನ ಕರ್ತವ್ಯವನ್ನು ನೆರವೇರಿಸುವಲ್ಲಿ ಅವರು ವಿಫಲರಾಗಿದ್ದಾರೆ ಮತ್ತು ಮೊದಲಿನ ಚೈತನ್ಯ ಅವರಲ್ಲಿ ಉಳಿದಿಲ್ಲ ಎನ್ನುವುದು ಅವರ ಆಪ್ತರ ಅನಿಸಿಕೆ. ಇದೇ ಸಂದರ್ಭದಲ್ಲಿ ಹೊರ, ಒಳಗಿನ ರಾಜಕೀಯಕ್ಕೆ ರತ್ನಾಕರ ಕೂಡ ಬಲಿಯಾದರು.
ಸಜ್ಜನ ರಾಜಕಾರಣಿಯಾಗಿ ಗುರುತಿಸಲ್ಪಟ್ಟ ಕಿಮ್ಮನೆ ಅವರನ್ನು ಬೇಡಬೇಡವೆಂದರೂ ವಿವಾದಗಳು ಸುತ್ತುವರಿದವು. ವಿರೋಧ ಪಕ್ಷಗಳೂ ಅವರ ವಿರುದ್ಧ ವ್ಯಾಪಕ ಸಂಚುಗಳನ್ನು ಮಾಡಿದವು. ಮಾಧ್ಯಮಗಳೂ ಅವರ ವರ್ಚಸ್ಸಿನ ಮೇಲೆ ದಾಳಿ ಮಾಡಿದವು. ಇತ್ತೀಚೆಗೆ ಪ್ರಶ್ನೆ ಪತ್ರಿಕೆ ಸೋರಿಕೆಯ ಕಳಂಕವನ್ನೂ ಕಿಮ್ಮನೆ ಮೇಲೆಯೇ ಎರಚಲಾಯಿತು. ಅವರನ್ನು ಹೊರಹಾಕುವುದು ಸಿದ್ದರಾಮಯ್ಯ ಅವರಿಗೆ ಅನಿವಾರ್ಯ ಎನ್ನುವಂತಹ ಪರಿಸ್ಥಿತಿಯನ್ನು ಸೃಷ್ಟಿಸಲಾಯಿತು. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಕೆಲವು ತಪ್ಪುಗಳೂ ನಡೆದಿವೆ. ಡಿಕೆಶಿಯಂಥವರ ವರ್ಚಸ್ಸು ಸರಕಾರದೊಳಗೆ ವಿಸ್ತರಿಸುವುದು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಒಳಿತಲ್ಲ. ಪುನರಾಚನೆಯ ಸಂದರ್ಭದಲ್ಲಿ ಕೆಲವೆಡೆ ಸಿದ್ದರಾಮಯ್ಯ ತೀವ್ರ ಒತ್ತಡಕ್ಕೂ ಬಲಿಯಾಗಿದ್ದಾರೆ. ಆದರೆ, ತನ್ನೆಲ್ಲ ಮಿತಿಯಲ್ಲೂ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಿದ್ದರಾಮಯ್ಯ ಅಂಜಿಕೆ ವ್ಯಕ್ತಪಡಿಸಿಲ್ಲ ಎನ್ನುವುದನ್ನು ಯಾವ ರೀತಿಯಲ್ಲೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಈ ಪುನಾರಚನೆ ಸಿದ್ದರಾಮಯ್ಯ ಅವರಿಗೆ ಆಡಳಿತದಲ್ಲಿ ಯಾವ ರೀತಿ ಸಹಕರಿಸುತ್ತದೆ ಎನ್ನುವುದನ್ನು ಊಹಿಸಿ, ಈಗಲೇ ಟೀಕಿಸುವುದಕ್ಕಿಂತ ಅವರಿಗೆ ಇನ್ನೊಂದಿಷ್ಟು ಸಮಯ ಕೊಟ್ಟು ಬಳಿಕ ವಿಮರ್ಶಿಸುವುದೇ ಹೆಚ್ಚು ಸೂಕ್ತ.







